ಕೋಲಾರ: ಚಿನ್ನದ ನಾಡಿನಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಐಷಾರಾಮಿ ವಿಲ್ಲಾ ಮೇಲೆ ದಾಳಿ ಮಾಡಿದ್ದು, ಮತದಾರರಿಗೆ ಹಂಚಲು ಇಟ್ಟಿದ್ದ ಬರೋಬ್ಬರಿ 4 ಕೋಟಿ ರೂ. ಹಣ ಜಪ್ತಿ ಮಾಡಿದ್ದಾರೆ.
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲೆಂದು ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್’ನ ವಿಲ್ಲಾ ಸುಮಾರು 4.05 ಕೋಟಿ ರೂಪಾಯಿ ಹಣ ಇಟ್ಟಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದು, ವಿಲ್ಲಾದ ರೂಮ್ ನಂಬರ್-279ನಲ್ಲಿ ಬೆಡ್ ಮೇಲೆ 500, 200, 2 ಸಾವಿರ ರೂ. ಮುಖಬೆಲೆಯ ಕಂತೆ ಕಂತೆ ಹಣ ಸಿಕ್ಕಿದೆ. ಬಂಗಾರಪೇಟೆ ಪಂಚಾಯಿತಿ ಹೆಸರು, ಬೂತ್ಗಳ ಹೆಸರು ಬರೆದು ಎನ್ವಲಪ್ ಕವರ್’ಗಳಲ್ಲಿ ಹಣ ಇಟ್ಟಿದ್ದರು.
ರೂಮ್’ನಲ್ಲಿ ಒಟ್ಟು 2 ಕೋಟಿ ರೂ. ಹಣ ಪತ್ತೆಯಾಗಿದ್ದು, ಅಲ್ಲದೇ ವಿಲ್ಲಾದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಪರಿಶೀಲನೆ ನಡೆಸಿದಾಗ ಮೂರು ಗೋಣಿ ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದ ಒಂದೂವರೆ ಕೋಟಿ ಹಣ ಪತ್ತೆಯಾಗಿದೆ. ಒಟ್ಟಾರೆ 4.5 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಅಧಿಕಾರಿಗಳು ದಾಳಿ ಮಾಡುವ ಮುಂಚೆಯೇ ಹಣ ತಂದಿಟ್ಟವರು ಎಸ್ಕೇಪ್ ಆಗಿದ್ದಾರೆ.
ಇನ್ನು ದಾಖಲೆಗಳ ಪರಿಶೀಲನೆ ನಡೆಸಿದಾಗ ಈ ವಿಲ್ಲಾ ಬೆಂಗಳೂರು ಮೂಲದ ಪೋನಿಕಾ ಕಾಪಾಡಿಯಾ ವೈಫ್ ಆಫ್ ಕರನ್ ಕಾಪಾಡಿಯಾ ಎಂಬುವರ ಹೆಸರಿನಲ್ಲಿದೆ. ರಮೇಶ್ ಯಾದವ್ ಎಂಬವರು ಬಾಡಿಗೆ ಪಡೆದಿದ್ದಾರೆ ಎಂಬುದು ಗೊತ್ತಾಗಿದೆ. ಕಾರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮುಖಂಡನದ್ದು ಎಂಬ ಮಾಹಿತಿ ಸಿಕ್ಕಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.