ಕೋಲ್ಕತ್ತಾ ಆಸ್ಪತ್ರೆಯಲ್ಲಿ ತನ್ನ ಕರ್ತವ್ಯದ ವೇಳೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ವಿಚಾರವಾಗಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಪ್ರತೀ 2 ಗಂಟೆಗೊಮ್ಮೆ ಆಯಾ ರಾಜ್ಯಗಳ ಸ್ಥಿತಿಗತಿ ವರದಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಈ ಆದೇಶವನ್ನು ಹೊರಡಿಸಿದ್ದು, ಪ್ರತಿ ಎರಡು ಗಂಟೆಗಳಿಗೊಮ್ಮೆ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ವರದಿಯನ್ನು ಸಲ್ಲಿಸುವಂತೆ ಕೇಳಿದೆ. ಈ ಅಧಿಸೂಚನೆಯ ಪ್ರಕಾರ, ಗೃಹ ಸಚಿವಾಲಯವು ದೇಶದ ಎಲ್ಲಾ ರಾಜ್ಯ ಪೊಲೀಸ್ ಪಡೆಗಳಿಗೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಮೇಲ್, ಫ್ಯಾಕ್ಸ್ ಅಥವಾ ವಾಟ್ಸಾಪ್ ಮೂಲಕ ವರದಿಗಳನ್ನು ಕಳುಹಿಸಲು ನಿರ್ದೇಶಿಸಿದೆ.