ಕೋಲ್ಕತ್ತ: ಮತದಾನ ಪೂರ್ವ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ, ಮತದಾನ ದಿನವೂ ಹಿಂಸಾಚಾರ ನಡೆದು ಹಲವು ಮಂದಿಯನ್ನು ಕೊಲೆ ಮಾಡಲಾಗಿದೆ.
ಶನಿವಾರ ಪಶ್ಚಿಮ ಬಂಗಾಳದಲ್ಲಿ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದೆ.
ಕೂಚ್ ಬೆಹಾರ್ ಜಿಲ್ಲೆಯ ಫಲಿಮರಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿಯ ಬೂತ್ ಏಜೆಂಟ್ ಮಧಾಬ್ ಬಿಸ್ವಾಸ್ ಎಂಬವರನ್ನು ಕೊಲೆ ಮಾಡಲಾಗಿದೆ.
ಬಿಸ್ವಾಸ್ ಅವರು ಮತಗಟ್ಟೆಗೆ ಪ್ರವೇಶ ಮಾಡುವ ವೇಳೆ ಟಿಎಂಸಿ ಕಾರ್ಯಕರ್ತರು ತಡೆದಿದ್ದಾರೆ. ಆಗ ನಡೆದ ವಾಗ್ವಾದ ಹತೋಟಿ ಮೀರಿ ಕೊಲೆ ನಡೆದಿದೆ ಎಂದು ಬಿಜೆಪಿ ಹೇಳಿದೆ. ಆದರೆ ಇದನ್ನು ಟಿಎಂಸಿ ನಿರಾಕರಿಸಿದೆ.
ಉತ್ತರ 24 ಪರಗಣ ಜಿಲ್ಲೆಯ ಕದಂಬಗಾಚಿಯಲ್ಲಿ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರನ್ನು ಥಳಿಸಿ ಕೊಲೆ ಮಾಡಲಾಗಿದೆ. ಮೃತರನ್ನು ಅಬ್ದುಲ್ಲಾ (41) ಎಂದು ಗುರುತಿಸಲಾಗಿದೆ. ಥಳಿತದಿಂದ ಗಂಭೀರ ಗಾಯಗೊಂಡಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮುರ್ಶಿದಾಬಾದ್ ಜಿಲ್ಲೆಯ ಕಪಾಸ್ ದಂಗ್ ಪ್ರದೇಶದಲ್ಲಿ ಚುನಾವಣಾ ಸಂಬಂಧಿ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತ ಮೃತಪಟ್ಟಿದ್ದಾರೆ. ಕೂಚ್ ಬೆಹಾರ್ ನ ತೂಫಾನ್‌ಗಂಜ್ ನಲ್ಲಿ ಮತ್ತೊರ್ವ ವ್ಯಕ್ತಿಯ ಹತ್ಯೆಯಾಗಿದೆ.
ಮಾಲ್ಡಾ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಡೆದ ಸಂಘರ್ಷದಲ್ಲಿ ಟಿಎಂಸಿ ನಾಯಕನ ಸಹೋದರನ ಹತ್ಯೆ ನಡೆದಿದೆ. ಮಾಣಿಕ್‌ಚಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮಲೇಕ್ ಶೇಖ್ ಎಂಬವರೇ ಕೊಲೆಗೀಡಾದವರು.
ಮೂರು ಸ್ತರದ ಪಂಚಾಯಿತಿ ವ್ಯವಸ್ಥೆಯಲ್ಲಿ 73,887 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 2.06 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬೆಳಿಗ್ಗೆ 6 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 5.67 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಚುನಾವಣೆಗೆ ದಿನಾಂಕ ಘೋಷಣೆಯಾದಂತೆ ಈವರೆಗೆ ಸಂಭವಿಸಿದ ಹಿಂಸಾಚಾರದಲ್ಲಿ 15ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ರಾಜ್ಯದ 70 ಸಾವಿರ ಪೊಲೀಸ್ ಸಿಬ್ಬಂದಿ ಜೊತೆಗೆ ಕನಿಷ್ಠ 600 ತುಕಡಿ ಕೇಂದ್ರ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
63,229 ಗ್ರಾಮ ಪಂಚಾಯಿತಿ, 22 ಜಿಲ್ಲೆಗಳ 9,730 ಪಂಚಾಯಿತಿ ಸಮಿತಿ ಮತ್ತು 20 ಜಿಲ್ಲೆಗಳ 928 ಜಿಲ್ಲಾ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.