ಚಾಮರಾಜನಗರ(Chamarajangara): ಕೊಳ್ಳೇಗಾಲ ನಗರಸಭೆಯ ಏಳು ವಾರ್ಡ್’ಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಏಳು ವಾರ್ಡ್’ಗಳ ಪೈಕಿ ಆರರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಂದು ವಾರ್ಡ್ ನಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದೆ.
ಸೋಮವಾರ ಬೆಳಿಗ್ಗೆ ಮತ ಎಣಿಕೆ ಕಾರ್ಯನಡೆದಿದ್ದು, ಬೆಳಿಗ್ಗೆ 8 ಗಂಟೆಗೆ ಆರಂಭವಾದ ಎಣಿಕೆ. ಒಂದೂವರೆ ಗಂಟೆಯಲ್ಲಿ ಮುಕ್ತಾಯವಾಯಿತು.
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಕಾರಣಕ್ಕೆ ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಬಿಎಸ್ ಪಿಯ ಏಳು ಸದಸ್ಯರ ಸದಸ್ವತ್ವ ಅನರ್ಹ ಆಗಿತ್ತು. ಇದರಿಂದ ತೆರವಾದ ಏಳು ವಾರ್ಡ್ ಗಳಿಗೆ (2, 6, 7, 13, 21, 25 ಹಾಗೂ 26) ಉಪಚುನಾವಣೆ ನಡೆದಿತ್ತು.
ಸದಸ್ಯತ್ವ ಅನರ್ಹಗೊಂಡಿದ್ದ ಏಳು ಜನರ ಪೈಕಿ ಆರು ಮಂದಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಪೈಕಿ ಐವರು ಗೆಲುವು ಸಾಧಿಸಿದ್ದಾರೆ. 2ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ನಾಗಮಣಿ ಅವರು ಮಾತ್ರ ಸೋತಿದ್ದಾರೆ. 6ನೇ ವಾರ್ಡ್ ನಲ್ಲಿ ಮಾನಸ, 7ನೇ ವಾರ್ಡ್ ನಲ್ಲಿ ನಾಸಿರ್ ಷರೀಫ್, 13ರಲ್ಲಿ ಪವಿತ್ರ, 21ರಲ್ಲಿ ಪ್ರಕಾಶ್, 25ರಲ್ಲಿ ರಾಮಕೃಷ್ಣ ಹಾಗೂ 26ನೇ ವಾರ್ಡ್ ನಲ್ಲಿ ನಾಗಸುಂದ್ರಮ್ಮ ಗೆಲುವು ಸಾಧಿಸಿದ್ದಾರೆ.2ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ನ ಭಾಗ್ಯ ಜಯಗಳಿಸಿದ್ದಾರೆ.
ಆರು ಅಭ್ಯರ್ಥಿಗಳು ಗೆಲ್ಲುತ್ತಿದ್ದಂತೆಯೇ ಶಾಸಕ ಎನ್. ಮಹೇಶ್, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.