ಅಮರಾವತಿ(Amaravathi): ಕೊನಾರ್ಕ್ ಎಕ್ಸ್ಪ್ರೆಸ್(Konark Express) ರೈಲು(Train) ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಬಟುವಾ ಗ್ರಾಮದ ಬಳಿ ನಡೆದಿದೆ.
ಮೂಲಗಳ ಪ್ರಕಾರ ಕೊಯಮತ್ತೂರು–ಸಿಲ್ಚಾರ್ ಎಕ್ಸ್ಪ್ರೆಸ್ ರೈಲಿನಿಂದ ಸಿಗಡಮ್–ಚಿಪುರುಪಲ್ಲಿ ನಿಲ್ದಾಣಗಳ ನಡುವೆ ಇಳಿದು ಪಕ್ಕದ ಹಳಿಯತ್ತ ಪ್ರಯಾಣಿಕರು ಓಡಲು ಪ್ರಯತ್ನಿಸುತ್ತಿದ್ದಾಗ ಅದೇ ಹಳಿಯಲ್ಲಿ ವೇಗವಾಗಿ ಬಂದ ಭುವನೇಶ್ವರ–ಮುಂಬೈ ಕೊನಾರ್ಕ್ ರೈಲು ಹಳಿಯ ಮೇಲಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಪರಿಣಾಮ ಹಳಿಯ ಮೇಲಿದ್ದ 5 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಶಾಖಪಟ್ಟಣ-ಪಲಾಸ ಮುಖ್ಯ ಮಾರ್ಗದ ಮಧ್ಯಭಾಗದಲ್ಲಿ ಘಟನೆ ನಡೆದಿದ್ದು, ಗಾಯಗೊಂಡ ಒಬ್ಬ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.