ಕೊಪ್ಪಳ : ಜಿಲ್ಲೆಯಲ್ಲಿ ನಡೆದಿದ್ದ ಹಿಂದೂ ಯುವಕ ಗವಿಸಿದ್ದಪ್ಪ ಹತ್ಯೆ ಪ್ರಕರಣ ಇದೀಗ ದೆಹಲಿ ಅಂಗಳ ತಲುಪಿದೆ. ರಾಜ್ಯ ಬಿಜೆಪಿ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ್ ಆರ್.ಅಶೋಕ್ ಸೇರಿದಂತೆ ಇತರರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಬಿಜೆಪಿ ನಾಯಕರು ಅಮಿತ್ ಶಾ ಅವರಿಗೆ ಗವಿಸಿದ್ದಪ್ಪ ಹತ್ಯೆ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಆ.3ರಂದು ಕೊಪ್ಪಳದ ವಾರ್ಡ್ ನಂಬರ್ 3ರ ಮಸೀದಿ ಮುಂಭಾಗದಲ್ಲಿ ಗವಿಸಿದ್ದಪ್ಪನ ಹತ್ಯೆ ನಡೆದಿತ್ತು. ಸಾಧಿಕ್ ಎನ್ನುವ ಯುವಕ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಗವಿಸಿದ್ದಪ್ಪ ಪೋಷಕರು ಹಾಗೂ ಬಿಜೆಪಿ ನಾಯಕರು ಆಗ್ರಹಿಸಿದ್ದರು.
ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿದ್ದೆವು, ಆಗ ರಾಜ್ಯಪಾಲರು ಕೊಪ್ಪಳ ಪೊಲೀಸರಿಂದ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದರು. ಗವಿಸಿದ್ದಪ್ಪ ಕೊಲೆ ಕೇಸ್‌ನ್ನು ಎನ್‌ಐಎ ತನಿಖೆಗೆ ವಹಿಸಿ ಎಂದು ಬಿಜೆಪಿ ನಾಯಕರು ಅಮಿತ್ ಶಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.














