ಮಂಗಳೂರು(ದಕ್ಷಿಣ ಕನ್ನಡ): ಶ್ರೀರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಇಂದು ಮಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ನ ಈ ನಿರ್ಧಾರ ಅನಿರೀಕ್ಷಿತವಲ್ಲ. ಶ್ರೀರಾಮ ಕಾಲ್ಪನಿಕ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದೇ ಕಾಂಗ್ರೆಸ್. ಶ್ರೀರಾಮ ಮಂದಿರ ಶಿಲಾನ್ಯಾಸ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸಿ ಸದನಕ್ಕೆ ಬಂದವರು ಕಾಂಗ್ರೆಸ್ಸಿಗರು. ಶ್ರೀರಾಮ ಮಂದಿರ ಆಗಿರುವುದು ಸಹಿಸದ ಮಾನಸಿಕತೆ ಕಾಂಗ್ರೆಸ್ ನದ್ದು ಎಂದು ಕಿಡಿಕಾರಿದ್ದಾರೆ. ಅಂದಿನಿಂದ ಇಂದಿನವರೆಗೆ ಅವರ ಮಾನಸಿಕತೆ ಹಾಗೇ ಇದೆ. ಸಿದ್ದರಾಮಯ್ಯ ಶ್ರೀರಾಮ ಮಂದಿರಕ್ಕೆ ಹೋಗಬಾರದು ಎನ್ನುವ ಮಾನಸಿಕತೆಯಲ್ಲೇ ಇರುವವರು.
ಆದರೆ ಕಾಂಗ್ರೆಸ್ ನ ಕೆಳಸ್ತರದ ಹಿಂದೂ ಕಾರ್ಯಕರ್ತರು ಶ್ರೀರಾಮನ ಬಗ್ಗೆ ಸಂಭ್ರಮ ಪಡುತ್ತಿದ್ದಾರೆ. ಅಲ್ಪಸಂಖ್ಯಾತರ ತುಷ್ಠಿಕರಣವೇ ಕಾಂಗ್ರೆಸ್ ನ ಈ ನಿರ್ಧಾರಕ್ಕೆ ಕಾರಣ.
ಅಲ್ಪಸಂಖ್ಯಾತರ ಮತಗಳಿಗೆ ಡ್ಯಾಮೇಜ್ ಆಗಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ರಾಮ ಮಂದಿರ ಮಾತ್ರವಲ್ಲ , ಹಿಂದೂ ಅನ್ನುವ ಪ್ರತಿಯೊಬ್ಬರನ್ನೂ ಬಹಿಷ್ಕರಿಸುತ್ತಾರೆ. ಶ್ರೀರಾಮ ಭಕ್ತರಿಗೆ ಕಾಂಗ್ರೆಸ್ ಅಪಚಾರ ಮಾಡಿದೆ. ಹೀಗಾಗಿ ಕಾಂಗ್ರೆಸ್ ದೇಶಾದ್ಯಂತ ಭಾರೀ ಸವಾಲು ಎದುರಿಸಲಿದೆ. ನಮ್ಮ ಹೆಸರಲ್ಲೇ ರಾಮ ಇದ್ದಾರೆ ಎನ್ನುವ ಡಿಕೆ ಶಿವಕುಮಾರ್ ಈಗ ಏನು ಅನ್ನುತ್ತಾರೆ. ಅಲ್ಲದೇ ಕಾಂಗ್ರೆಸ್ ನಿರ್ಧಾರದ ಬಗ್ಗೆ ಡಿ ಕೆ ಶಿವಕುಮಾರ್ ಈಗ ಏನು ಅನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ.