ಮನೆ ಶಿಕ್ಷಣ ಕೆಪಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ: ವಂದತಿಗಳನ್ನು ನಂಬಬೇಡಿ: ಆಯೋಗ

ಕೆಪಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ: ವಂದತಿಗಳನ್ನು ನಂಬಬೇಡಿ: ಆಯೋಗ

0

ಬೆಂಗಳೂರು : ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ೩೮೪ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸುದ್ದಿ ಸುಳ್ಳು. ಈ ರೀತಿಯ ಯಾವುದೇ ವದಂತಿಗಳಿಗೆ ಅಭ್ಯರ್ಥಿ ಕಿವಿಗೊಡಬಾರದು ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮನವಿ ಮಾಡಿದೆ.
ಮೇ ೫ರಂದು ನಡೆದ ಕೆಪಿಎಸ್ಸಿ ಮುಖ್ಯ ಪರೀಕ್ಷೆಯ ಸಾಮಾನ್ಯ ಅಧ್ಯಯನ-೧ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವ ಸಂಶಯದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದೂರು ನೀಡಿದ್ದರು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿನ ಕಸ್ತೂರಬಾ ನಗರದ ಬಿಬಿಎಂಪಿ ಸಂಯೋಜಿತ ಪಿಯು ಕಾಲೇಜಿನ ಪರೀಕ್ಷೆ ಕೇಂದ್ರಕ್ಕೆ ಬಂದಿದ್ದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದರು.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಕೆಪಿಎಸ್‌ಸಿ, ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಪರೀಕ್ಷಾ ಉಪ ಕೇಂದ್ರದ ಮೇಲ್ವಿಚಾರಕರು ಮತ್ತು ಆಯೋಗದಿಂದ ನಿಯೋಜಿತರಾದ ಸ್ಥಳೀಯ ನಿರೀಕ್ಷಣಾಧಿಕಾರಿಗಳಿಂದ ವಿಸ್ತೃತವಾದ ವರದಿಗಳನ್ನು ಪಡೆಯಲಾಗಿದೆ. ಆಯೋಗವು ಪ್ರೊಬೇಷನರಿ ಪರೀಕ್ಷೆಗಳೂ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುವಾಗ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಮತ್ತು ಪರೀಕ್ಷಾ ಗೌಪ್ಯತೆಯನ್ನು ಕಾಪಾಡುವ ಮತ್ತು ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಹಾಗೂ ದುರಾಚಾರ ಪ್ರಕರಣಗಳು ನಡೆಯದಂತೆ ತಡೆಯಲು ಹಲವು ಹಂತಗಳ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿರುತ್ತದೆ.

ಅದರಂತೆಯೇ ಈ ಪರೀಕ್ಷೆಯಲ್ಲಿಯೂ ಪ್ರಶ್ನೆ ಪತ್ರಿಕೆಯ ಭದ್ರತೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮೊಹರು ಮಾಡಿದ ಪೆಟ್ಟಿಗೆ, ಮೊಹರು ಮಾಡಿದ ಲೋಹದ ಟ್ರಂಕ್. ಮೊಹರು ಮಾಡಿದ ಟ್ಯಾಂಪರ್ ಎವಿಡೆಂಟ್ ಕವರ್ಗಳನ್ನು ಇತ್ಯಾದಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅದರೊಂದಿಗೆ ಪ್ರಶ್ನೆಪತ್ರಿಕೆಗಳನ್ನು ಸಾಗಿಸುವಾಗ ಅವು ಹಾನಿಯಾಗದಂತೆ ಸಂರಕ್ಷಿಸಲು ನೀರು ನಿರೋಧಕ ಪ್ಲಾಸ್ಟಿಕ್ ಕವರ್ಗಳನ್ನು ದ್ರವ ಪದಾರ್ಥಗಳಿಂದ ಸುರಕ್ಷಿತವಾಗಿ ಸಂರಕ್ಷಿಸುವ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸಲಾಗಿದ್ದು, ಅದು ಟ್ಯಾಂಪರ್ ಎವಿಡೆಂಟ್ ಕವರ್ ಆಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಸದರಿ ಪರೀಕ್ಷೆಯ ಪರೀಕ್ಷಾ ಉಪಕೇಂದ್ರಕ್ಕೆ ವಿತರಿಸಲಾದ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಪೆಟ್ಟಿಗೆಗಳು, ಟ್ರಂಕ್ ಗಳು ಮತ್ತು ಟ್ಯಾಂಪರ್ ಎವಿಡೆಂಟ್ ಕವರ್ ಗಳಲ್ಲಿನ ಎಲ್ಲ ಭದ್ರತಾ ಮೊಹರುಗಳು ಕ್ರಮಬದ್ಧವಾಗಿಯೇ ಇರುವುದು ಕಂಡುಬಂದಿರುತ್ತದೆ. ಇದನ್ನು ಅಭ್ಯರ್ಥಿಗಳು, ಉಪಕೇಂದ್ರದ ಮೇಲ್ವಿಚಾರಕರು, ಸ್ಥಳೀಯ ನಿರೀಕ್ಷಣಾಧಿಕಾರಿಗಳು ಮತ್ತು ಕೊಠಡಿ ಸಂವೀಕ್ಷಕರು ಖಚಿತಪಡಿಸಿದ್ದಾರೆ. ಸದರಿ ಉಪ-ಕೇಂದ್ರಕ್ಕಾಗಿ ಕೊನೆಯ ಪದರದ ಪ್ಲಾಸ್ಟಿಕ್ ಕವರ್ಗಳಲ್ಲಿ ಅಳವಡಿಸಲಾದ ಪ್ರಶ್ನೆ ಸಹಿತ ಉತ್ತರ ಪುಸ್ತಿಕೆಗಳ ಸಂಖ್ಯೆ ಇತರ ಕೇಂದ್ರಗಳಿಗೆ ಸಾಮಾನ್ಯವಾಗಿ ವಿತರಿಸಲಾದ ಪ್ರಶ್ನೆಪತ್ರಿಕೆಗಳಿಗಿಂತ ದುಪ್ಪಟ್ಟಾಗಿತ್ತು ಎಂದು ಕೆಪಿಎಸ್ ಸಿ ತಿಳಿಸಿದೆ.

ಪರೀಕ್ಷಾ ಗೌಪ್ಯ ಸಾಮಗ್ರಿಗಳ ಗೌಪ್ಯತೆ, ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಆಯೋಗವು ಅತ್ಯಂತ ಜವಾಬ್ದಾರಿಯುತವಾಗಿ ಕಾಳಜಿ ವಹಿಸುವುದಲ್ಲದೆ, ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಯತ್ನಿಸುತ್ತಿದೆ ಎಂಬ ಅಂಶವನ್ನು ಪುನರುಚ್ಚರಿಸುತ್ತಾ, ಸಾಮಾಜಿಕ ಮತ್ತು ಸಮೂಹ ಮಾಧ್ಯಮದಲ್ಲಿ ಭಿತ್ತರಗೊಳ್ಳುತ್ತಿರುವ ವಿಷಯವು ಸತ್ಯಕ್ಕೆ ದೂರವಾದುದ್ದಾಗಿದ್ದು, ಇತರ ಅಭ್ಯರ್ಥಿಗಳು ಇದರಿಂದ ಯಾವುದೇ ರೀತಿಯಲ್ಲಿಯೂ ಹತಾಶರಾಗಬಾರದೆಂದು ಎಂದು ಕೆಪಿಎಸ್ಸಿ ಮನವಿ ಮಾಡಿದೆ.

ಪ್ರಶ್ನೆಪತ್ರಿಕೆಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಅವುಗಳನ್ನು ಬಹುಪದರಗಳುಳ್ಳ ಪ್ಯಾಕ್ ನಲ್ಲಿರಿಸಿ ಮೊಹರು ಮಾಡಲಾಗಿರುತ್ತದೆ. ಹಾಗಾಗಿ, ಸದರಿ ಉಪಕೇಂದ್ರದ ೨ ಕೊಠಡಿಗಳಲ್ಲಿ ಟ್ಯಾಂಪರ್ ಎವಿಡೆಂಟ್ ಎನೊಲಪ್ ಒಳಗಿನ ದ್ರವ ಪದಾರ್ಥಗಳಿಂದ ಸಂರಕ್ಷಿಸಲು ಪ್ಯಾಕ್ ಮಾಡಲಾಗಿದ್ದ ಪ್ಲಾಸ್ಟಿಕ್ ಕವರ್ಗಳು ಮಾತ್ರ ಪ್ಯಾಕಿಂಗ್ ಅಥವಾ ಸಾಗಣೆಯ ವೇಳೆ ಯಾಂತ್ರಿಕವಾಗಿ ಹರಿದಿರಬಹುದಾದ ಸಾಧ್ಯತೆ ಇರುತ್ತದೆಯೇ ಹೊರತು, ಇತರ ಯಾವುದೇ ಲೋಪಗಳುಂಟಾಗಿರುವುದಿಲ್ಲ ಎಂದು ಕೆಪಿಎಸ್ ಸಿ ಸ್ಪಷ್ಟನೆ ನೀಡಿದೆ.