ಮನೆ ರಾಜ್ಯ ಕೆಪಿಟಿಸಿಎಲ್‌ ನೇಮಕಾತಿ ಅಕ್ರಮ: ಪ್ರಮುಖ ಆರೋಪಿ ಬಂಧನ

ಕೆಪಿಟಿಸಿಎಲ್‌ ನೇಮಕಾತಿ ಅಕ್ರಮ: ಪ್ರಮುಖ ಆರೋಪಿ ಬಂಧನ

0

ಬೆಳಗಾವಿ (Belgavi): ಕೆ‍ಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಸಂಜೀವ ಲಕ್ಷ್ಮಣ ಭಂಡಾರಿ ಬಂಧಿತ ಪ್ರಮುಖ ಆರೋಪಿ. ಇದರೊಂದಿಗೆ ಬಂಧಿತರ ಸಂಖ್ಯೆ 13ಕ್ಕೆ ಏರಿದೆ. ಈ ಆರೋಪಿ ಹಿಂದಿನ ಪೊಲೀಸ್‌ ಕಾನ್‌ ಸ್ಟೇಬಲ್‌ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ಎಸಗಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಕೆಪಿಟಿಸಿಎಲ್‌ ನೇಮಕಾತಿಯ ಅಕ್ರಮ ನಂತರ ತಲೆಮರೆಸಿಕೊಂಡಿದ್ದ.

ಹುಬ್ಬಳ್ಳಿ– ಧಾರವಾಡ ಪೊಲೀಸ್‌ ಕಮೀಷನರೇಟ್‌ನ ಬೆಂಡಿಗೇರಿ ಠಾಣೆಯ ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಲಾಗಿದ್ದು, ಗೋಕಾಕದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆರೋಪಿಯನ್ನು ಏಳು ದಿನಗಳವರೆಗೆ ಪೊಲೀಸ್‌ ವಶಕ್ಕೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್‌ ತಿಳಿಸಿದ್ದಾರೆ.

ಆಗಸ್ಟ್‌ 7ರಂದು ಗೋಕಾಕದಲ್ಲಿ ನಡೆದ ಪರೀಕ್ಷೆಯಲ್ಲಿ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬಾತ ಸ್ಮಾರ್ಟ್‌ವಾಚ್‌ ಬಳಸಿ, ಪ್ರಶ್ನೆಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಮ್‌ ಆ್ಯಪ್‌ ಮೂಲಕ ಕಳುಹಿಸಿದ್ದ. ಈ ಬಗ್ಗೆ ಸಚಿನ್ ಎಂಬ ಇನ್ನೊಬ್ಬ ಅಭ್ಯರ್ಥಿ ದೂರು ನೀಡಿದ್ದ. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಈ ಅಕ್ರಮವು ಖಚಿತವಾಗಿತ್ತು. ವಿಶೇಷ ತಂಡದೊಂದಿಗೆ ಕಾರ್ಯಪ್ರವೃತ್ತರಾದ ಪೊಲೀಸರು, ಆ.22ರಂದು 9 ಮಂದಿ ಹಾಗೂ ಆ.24ರಂದು ಮೂವರು ಸೇರಿ ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದರು.

ಗೋಕಾಕ ಮಾತ್ರವಲ್ಲದೇ, ಗದಗ ನಗರದ ಮುನ್ಸಿಪಲ್‌ ಕಾಲೇಜಿನಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಹಾಗೂ ಅವರ ಮಗನನ್ನು ಈಗಾಗಲೇ ಬಂಧಿಸಲಾಗಿದೆ. ಬಂಧಿತರಲ್ಲಿ ಅಭ್ಯರ್ಥಿಗಳು, ಬ್ಲೂಟೂತ್‌ ಖರೀದಿಸಿದವರು, ಉತ್ತರ ರವಾನಿಸಿದವರೂ ಇದ್ದಾರೆ.