ಕೆ ಆರ್ ಪೇಟೆ:ಚಿನ್ನ ಕರಗಿಸುವ ನೆಪದಲ್ಲಿ ಚಿನ್ನದ ಸರದಲ್ಲಿ 5 ಗ್ರಾಂ ಚಿನ್ನ ಎಗರಿಸಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಪರಿಚಿತ ಇಬ್ಬರು ವ್ಯಕ್ತಿಗಳು ಬಂದು ಮುಗ್ದ ಮಹಿಳೆಯರಿಗೆ ನಿಮ್ಮ ಕಣ್ಣ ಮುಂದೆಯೇ ಚಿನ್ನದ ಒಡವೆಗಳನ್ನು ಕಡಿಮೆ ದರದಲ್ಲಿ ಪಾಲಿಶ್ ಮಾಡಿಕೊಡುವುದಾಗಿ ಹೇಳಿ ಚಿನ್ನ ಕರಗಿಸುವ ದ್ರಾವಣದಲ್ಲಿ ಸರದಿಂದ ಐದು ಗ್ರಾಂ ಚಿನ್ನ ವಂಚಿಸಿದ್ದಾರೆ.
ಬಲ್ಲೇನಹಳ್ಳಿ ಗ್ರಾಮದ ಗಣೇಶ್ ರ ಪತ್ನಿ ರಾಧಾ ರವರ 33 ಗ್ರಾಂ ತೂಕದ ಚಿನ್ನದ ಸರವನ್ನು ಐದೇ ನಿಮಿಷದಲ್ಲಿ ಪಳ ಪಳ ಹೊಳೆಯುವಂತೆ ಮಾಡಿಕೊಡುತ್ತೇವೆ ಎಂದು ನಂಬಿಸಿದರುವ ವಂಚಕರು, ಸರವನ್ನು ಚಿನ್ನ ಕರಗಿಸಲು ಉಪಯೋಗಿಸುವ ದ್ರಾವಣದೊಳಕ್ಕೆ ಹಾಕಿ ಸುಮಾರು 30ಸಾವಿರ ರೂ ಬೆಲೆ ಬಾಳುವ ಐದು ಗ್ರಾಂ ಶುದ್ದ ಬಂಗಾರವನ್ನು ಕರಗಿಸಿ ಪರಾರಿಯಾಗಿದ್ದಾರೆ.
ನಂತರ ಅದೇ ಬಲ್ಲೇನಹಳ್ಳಿ ಗ್ರಾಮಕ್ಕೆ ಬಂದು ನಿಂಗರಾಜು ಅವರ ಮನೆಯ ಚಿನ್ನದ ಸರವನ್ನು ಅದೇ ರೀತಿ ಪಾಲೀಶ್ ಮಾಡಿ ಕೊಡುತ್ತೇವೆ ಎಂದು 40 ಗ್ರಾಂ ಚಿನ್ನದ ಸರದಿಂದ 8 ಗ್ರಾಂ ಚಿನ್ನವನ್ನು ಕರಗಿಸಿಕೊಂಡು ವಾಪಸ್ ನೀಡಿದ್ದಾರೆ. ತಕ್ಷಣ ನಿಂಗರಾಜು ಅವರ ಪತ್ನಿ ಚಿನ್ನದ ಸರವನ್ನು ಕೈಯಲ್ಲಿಡಿದು ನೋಡಿದಾಗ ಸರದ ತೂಕ ಕಡಿಮೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಆರೋಪಿಯನ್ನು ಹಿಡಿದು ಮನೆಯಲ್ಲಿ ಕೂಡಿ ಹಾಕಿ ಬೂಕನಕೆರೆ ಗ್ರಾಮದಲ್ಲಿರುವ ಚಿನ್ನದ ಅಂಗಡಿಗೆ ಹೋಗಿ ನಿಂಗರಾಜು ಅವರ ಚಿನ್ನದ ಸರವನ್ನು ತೂಕ ಹಾಕಿಸಿದಾಗ 8ಗ್ರಾಂ ಚಿನ್ನ ಕಡಿಮೆಯಾಗಿರುವುದು ದೃಢಪಟ್ಟಿದೆ.ತಕ್ಷಣ ವಾಪಸ್ ಬಂದು ಆರೋಪಿಗೆ ಧರ್ಮದೇಟು ನೀಡಿ ಆರೋಪಿಯಿಂದ ಪೋನ್ ಪೇ ಮೂಲಕ 40 ಸಾವಿರ ಹಣ ವಸೂಲಿ ಮಾಡಿದ್ದಾರೆ. ನಿಂಗರಾಜುಗೆ ಹಣವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿರುವ ಅಪರಿಚಿತ ಆರೋಪಿ ಗ್ರಾಮದಿಂದ ಪರಾರಿಯಾಗಿದ್ದಾನೆ.
ಆದರೆ ಮೊದಲು ವಂಚನೆಗೆ ಒಳಗಾಗಿ ಐದು ಗ್ರಾಂ ಚಿನ್ನ ಕಳೆದುಕೊಂಡಿರುವ ಬಲ್ಲೇನಹಳ್ಳಿಯ ರಾಧಾ ಗಣೇಶ್ ಅವರು ಕೆ ಆರ್ ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಮಹಜರು ನಡೆಸಿ, ಆರೋಪಿಯ ಚಹರೆಯ ಬಗ್ಗೆ ಮಾಹಿತಿ ಪಡೆದುಕೊಂಡರು.ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ಕದ್ದಿರುವ ಚಿನ್ನವನ್ನು ವಾಪಸ್ ಕೊಡಿಸುವ ಭರವಸೆ ನೀಡಿರುವ ಪೊಲೀಸರು ಹಳ್ಳಿಯ ಮಹಿಳೆಯರನ್ನೆ ಹೆಚ್ಚಾಗಿ ವಂಚಿಸುತ್ತಿದ್ದು ಯಾರು ಸಹ ಇಂತಹ ವಂಚಕರಿಂದ ಎಚ್ಚರವಾಗಿರಬೇಕೆಂದು ತಿಳಿಸಿ ಅನುಮಾನಸ್ಪದವಾಗಿ ಇಂತಹವರು ಗ್ರಾಮಕ್ಕೆ ಬಂದರೆ ತಕ್ಷಣ ಪೋಲಿಸರಿಗೆ ನೀಡಬೇಕು ಎಂದು ಕೆ.ಆರ್.ಪೇಟೆ ಗ್ರಾಮಾಂತರ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುಬ್ಬಯ್ಯ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.