ರಾಯಚೂರು (Raichur): ಕೃಷ್ಣಾ ಮತ್ತು ತುಂಗಾಭದ್ರಾ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ರಾಯಚೂರು, ಶಿವಮೊಗ್ಗ, ಬೆಳಗಾವಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಯಾಗುತ್ತಿರುವುದರಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದಂತೆಲ್ಲಾ ಹೊರಹರಿವಿನ ಪ್ರಮಾಣ ಕೂಡ ಗಂಟೆ ಗಂಟೆಗೂ ಹೆಚ್ಚಾಗುತ್ತಲಿದೆ. ನಾರಾಯಣಪುರ ಜಲಾಶಯಕ್ಕೆ ಎರಡು ಲಕ್ಷ ಹತ್ತುಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದರೆ, ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2ಲಕ್ಷ 19 ಸಾವಿರದ 550 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿದು ಬರುತ್ತಿರುವುದರಿಂದ ಲಿಂಗಸಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.
ಇದರಿಂದ ಶೀಲಹಳ್ಳಿ ಸೇತುವೆ ಸಂಪರ್ಕ ಹೊಂದಿರುವ ನಾಲ್ಕು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ನಡುಗಡ್ಡೆ ಗ್ರಾಮಗಳಾದ ಹಂಚಿನಾಳ, ಯರಗುಂದಿ, ಕಡದರಗಡ್ಡಿ ಮತ್ತು ಯರಗೊಡಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ನಾಲ್ಕು ಗ್ರಾಮಗಳ ಜನರು ದೇವದುರ್ಗಕ್ಕೆ ಬರಬೇಕಾದರೆ 40 ಕಿ.ಮೀ ಸುತ್ತ ತಿರುಗಿ ಬರಬೇಕಾದ ಪರಿಸ್ಥಿತಿ ಇದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆಯಾದಲ್ಲಿ ಹೂವಿನ ಹೆಡಗಿ ಸೇತುವೆ ಮುಳುಗಡೆಯಾಗಲಿದ್ದು, ದೇವದುರ್ಗ ಗುಲ್ಬರ್ಗಾ ರಸ್ತೆ ಸಂಪರ್ಕ ಕಡಿತಗೊಳಲಿದೆ.
ಈ ಕಡೆ ತುಂಗಾಭದ್ರಾ ನದಿ ಕೂಡ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿವೆ. ನದಿ ದಂಡೆಗೆ ಜನ, ಜಾನುವಾರುಗಳನ್ನು ಬಿಡದಂತೆ ಮುಂಜಾಗೃತಾ ಕ್ರಮವಾಗಿ ಡಂಗುರ ಮತ್ತು ಮೈಕುಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆಯಿಲ್ಲದಿದ್ದರೂ ಕೂಡ ನೆರೆ ಹಾವಳಿಯಿಂದ ಜಿಲ್ಲೆಯ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.