ರಾಮನಗರ: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಶುಕ್ರವಾರ (ಆ.09) ಚನ್ನಪಟ್ಟಣ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುವ ಆರೋಪದ ಕಾರಣದಿಂದ ಕಂದಾಯ ಸಚಿವರು ದಿಢೀರ್ ಭೇಟಿ ನೀಡಿದರು. ಇಲ್ಲಿ ಎಲ್ಲವೂ ಭ್ರಷ್ಟಾಚಾರ ಎಂದು ಜನರು ಕಣ್ಣೀರಿಟ್ಟು ಸಚಿವರಿಗೆ ದೂರು ಕೊಟ್ಟರು.
ತಹಶೀಲ್ದಾರ್ ನರಸಿಂಹಮೂರ್ತಿ, ಎಸಿ ಬಿನೋಯ್ ಗೆ ಸಚಿವರು ತರಾಟೆಗೆ ತೆಗೆದುಕೊಂಡರು.
ಕಡತಗಳನ್ನು ಪರಿಶೀಲನೆ ಮಾಡಿದಾಗ ಎಲ್ಲದರಲ್ಲಿಯೂ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ತಹಶೀಲ್ದಾರ್ ನರಸಿಂಹಮೂರ್ತಿ ವಿರುದ್ದ ಅಸಮಾಧಾನಗೊಂಡರು.
ತಾಲೂಕು ಕಚೇರಿ ಒಳಗೆಯೇ ಕಸದ ರಾಶಿ ಕಂಡು ಸಿಟ್ಟಿಗೆದ್ದ ಸಚಿವ ಕೃಷ್ಣಬೈರೇಗೌಡ, ಇದು ತಾಲೂಕು ಕಚೇರಿನಾ ಅಥವಾ ಕಸದ ಕಚೇರಿನಾ ಎಂದು ಪ್ರಶ್ನಿಸಿದರು.
“ಇದು ನಿಜಕ್ಕೂ ಬೇಸರ ತರಿಸಿದೆ. ನಮ್ಮ ಇಲಾಖೆಯಲ್ಲಿ ಈ ರೀತಿ ಆಗುತ್ತಿದೆ. ಇದು ನನ್ನದೇ ತಪ್ಪು ಎಂದು ಹೇಳುತ್ತೇನೆ, ಬೇರೆ ಯಾರಿಗೂ ದೋಷ ಹೊರಿಸಲ್ಲ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುತ್ತೇನೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದು ಸರ್ಕಾರದ ಕೆಲಸ ಎಂದು ಅಂದುಕೊಂಡಿಲ್ಲ. ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದು ಕೃಷ್ಣಬೈರೇಗೌಡ ಹೇಳಿದರು.