ಮನೆ ರಾಜ್ಯ ಕೆಆರ್‌ಎಸ್‌: ಸಂಗೀತ ಕಾರಂಜಿಗೆ ಹೈಟೆಕ್‌ ರೂಪ

ಕೆಆರ್‌ಎಸ್‌: ಸಂಗೀತ ಕಾರಂಜಿಗೆ ಹೈಟೆಕ್‌ ರೂಪ

0

ಶ್ರೀರಂಗಪಟ್ಟಣ:ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ ಬೃಂದಾವನದ ಸಂಗೀತ ನೃತ್ಯ ಕಾರಂಜಿಗೆ ಆಧುನಿಕ ಸ್ಪರ್ಶ ನೀಡಿದ್ದು ಉದ್ಘಾಟನೆಗೆ ಸಿದ್ಧಗೊಂಡಿದೆ. ಅ.15ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ.


ಬೃಂದಾವನದ ಉತ್ತರ ಭಾಗದಲ್ಲಿ ₹ 1.80 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿಯನ್ನು ಪುನರುಜ್ಜೀವನ ಮಾಡಲಾಗಿದೆ.
ಆಕರ್ಷಕ ವಿದ್ಯುತ್‌ ದೀಪಗಳ ಬೆಳಕಿನಲ್ಲಿ, ನೀರಿನ ಬುಗ್ಗೆಗಳ ಲಾಸ್ಯ ಮನಸೂರೆಗೊಳ್ಳುವಂತೆ ಸಂಗೀತ ಕಾರಂಜಿಯನ್ನು ರೂಪಿಸಲಾಗಿದೆ. ನೃತ್ಯಕ್ಕೆ ತಕ್ಕಂತೆ ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಮಾದರಿಯ ಸಂಗೀತವನ್ನು ಅಳವಡಿಸಲಾಗಿದೆ.
ಸಂಗೀತ ನೃತ್ಯ ಕಾರಂಜಿ ಪ್ರದರ್ಶನ ಸೋಮವಾರದಿಂದ ಶನಿವಾರದವರೆಗೆ ಸಂಜೆ 7ರಿಂದ 8 ಗಂಟೆವರೆಗೆ ನಡೆಯಲಿದೆ. ಭಾನುವಾರ ಮತ್ತು ರಜೆ ದಿನಗಳಲ್ಲಿ ಸಂಜೆ 7ರಿಂದ 9 ಗಂಟೆವರೆಗೂ ಕಾರಂಜಿಯ ನೃತ್ಯ ವೀಕ್ಷಣೆ ಮಾಡಬಹುದಾಗಿದೆ. ಪ್ರತಿ ವ್ಯಕ್ತಿಗೆ ₹ 50 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ಕೆ. ರಘುರಾಮನ್‌, ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌ ಕಾರಂಜಿಯ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು.
10 ದಿನ ದೀಪಾಲಂಕಾರ: ದಸರಾ ಉತ್ಸವದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟೆಗೆ ಅ.15ರಿಂದ 10 ದಿನಗಳ ಕಾಲ ಆಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತದೆ. ಬೃಂದಾವನದಲ್ಲಿ ಅ.20ರಿಂದ 5 ದಿನಗಳ ಕಾಲ ರಸಮಂಜರಿ ಹಾಗೂ ಇತರ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.