ಶ್ರೀರಂಗಪಟ್ಟಣ(Srirangapattana): ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೆಆರ್’ಎಸ್ ಬೃಂದಾವನವನ್ನು ನ.6ರಿಂದ ಅನಿರ್ಧಿಷ್ಟ ಅವಧಿವರೆಗೆ ಬಂದ್ ಆಗಿರುವ ಪರಿಣಾಮ ಕಾವೇರಿ ನೀರಾವರಿ ನಿಗಮಕ್ಕೆ 50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.
ಅ.21ರಿಂದ ನಾಲ್ಕು ಬಾರಿ ಚಿರತೆ ಕಾಣಿಸಿಕೊಂಡ ಕಾರಣ ಚಿರತೆ ಸೆರೆ ಹಿಡಿಯುವವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಬೃಂದಾವನಕ್ಕೆ ವಾರದ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ, ವಾರಾಂತ್ಯ, ಸರ್ಕಾರಿ ರಜಾ ದಿನಗಳಲ್ಲಿ 5 ಸಾವಿರಕ್ಕೂ ಜನರು ಭೇಟಿ ನೀಡುತ್ತಾರೆ.
ಪ್ರವಾಸಿಗರಿಗೆ ತಲಾ 50 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. 16 ದಿನಗಳಿಂದ ಪ್ರವೇಶ ಬಂದ್ ಆಗಿರುವ ಕಾರಣ ನಿಗಮಕ್ಕೆ ಆದಾಯದಲ್ಲಿ ನಷ್ಟ ಉಂಟಾಗಿದೆ.
ನಿಗಮದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೋವಿಡ್ ನಂತರ ಇದೇ ಮೊದಲ ಬಾರಿಗೆ ಹೆಚ್ಚು ದಿನ ಉದ್ಯಾನ ಬಂದ್ ಆಗಿದ್ದು, ನಿಗಮಕ್ಕೆ ಆದಾಯ ನಷ್ಟವಾಗುತ್ತಿದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.
ವ್ಯಾಪಾರಿಗಳಿಗೂ ನಷ್ಟ: ಕೆಆರ್’ಎಸ್’ನ ಬೃಂದಾವನದಲ್ಲಿ ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ನೂರಾರು ವ್ಯಾಪಾರಿಗಳು ಈಗ ಅವರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಣ್ಣಿನ ಅಂಗಡಿ, ತಂಪು ಪಾನೀಯ, ಕರಕುಶಲ ವಸ್ತು ಮಾರಾಟ ಸೇರಿದಂತೆ ನೂರಾರು ಅಂಗಡಿ ಮುಂಗಟ್ಟುಗಳಿವೆ. ಬೃಂದಾವನದ ಒಳಗಿರುವ ರಾಯಲ್ ಆರ್ಕಿಡ್, ಮಯೂರ ಹೋಟೆಲ್‌ಗಳು ಕೂಡ ಪ್ರವಾಸಿಗರಿಲ್ಲದೇ ನಷ್ಟ ಅನುಭವಿಸುತ್ತಿವೆ.