ಮೈಸೂರು: ದಶಕಗಳ ಕಾಲದಿಂದಲೂ ಎಲ್ಲಾ ದಾಖಲೆಗಳಲ್ಲಿ ಕೃಷ್ಣರಾಜಸಾಗರ ರಸ್ತೆ ಎಂದು ಉಲ್ಲೇಖಿಸಿರುವ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ನಾಮಕರಣ ಮಾಡಬಾರದೆಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮಹಾನಗರ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಕ್ಷಯರೋಗದಿಂದ ಮೃತರಾದ ರಾಜಕುಮಾರಿ ಕೃಷ್ಣಾಜಮ್ಮಣಿರವರ ನೆನಪಿಗಾಗಿ ಕ್ಷಯರೋಗ ಆಸ್ಪತ್ರೆ ನಿರ್ಮಾಣ ಮಾಡಿದ್ದರಿಂದ, ಸದರಿ ಆಸ್ಪತ್ರೆ ಇರುವ ರಸ್ತೆ ರಾಜಕುಮಾರಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಕೃಷ್ಣರಾಜಸಾಗರ ನಿರ್ಮಾಣ ಮಾಡಿರುವ ಕಾರಣಕ್ಕಾಗಿ ಕೆಆರ್ ಎಸ್ ರಸ್ತೆ ಎಂದು ನಾಮಕರಣ ಮಾಡಿ ದಶಕಗಳೇ ಕಳೆದಿದೆ. ಆದರೂ ಈ ರಸ್ತೆಗಳಿಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ವೆಂದು ಹೆಸರಿಡುವಂತೆ ದುರುದ್ದೇಶದಿಂದ ಸಿದ್ದರಾಮಯ್ಯನವರು ಶಾಸಕ ಕೆ.ಹರೀಶ್ ಗೌಡ ಅವರಿಂದ ಅರ್ಜಿಯನ್ನು ಕೊಡಿಸಿ ವಿವಾದ ಉಂಟುಮಾಡಿದ್ದಾರೆ. ಮತ್ತು ರಾಜಮನೆತನಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
ರಾಜಕುಮಾರಿ ರಸ್ತೆ ಮತ್ತು ಕೃಷ್ಣರಾಜ ಸಾಗರ ರಸ್ತೆ ಗಳು ಜನ ಸಾಮಾನ್ಯರಿಗೆ ಕೊಡುಗೆ ನೀಡಿರುವ ಹಿನ್ನಲೆಯಲ್ಲಿ ರಾಜಮನೆತನದವರನ್ನು ನೆನಪಿಸುವ ರಸ್ತೆಗಳಾಗಿವೆ. ಆದ್ದರಿಂದ ಈ ರಸ್ತೆಗಳಲ್ಲಿನ ಯಾವುದೇ ರಸ್ತೆಗೂ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ನಾಮಕರಣ ಮಾಡಬಾರದು, ರಾಜಮನೆತನದವರಿಗೆ ಅವಮಾನ ಮಾಡಬೇಕೆಂಬ ಸಿದ್ದರಾಮಯ್ಯನವರ ಪರೋಕ್ಷ ಪ್ರಯತ್ನಕ್ಕೆ ಮನ್ನಣೆ ನೀಡಬಾರದೆಂದು ಸದರಿ ಎರಡು ರಸ್ತೆಗೆ ಅಧಿಕೃತವಾಗಿ ನಾಮಕರಣ ಮಾಡಿಲ್ಲವಾದರೆ, ದಾಸಪ್ಪ ವೃತ್ತದಿಂದ ರಾಯಲ್ ಇನ್ ಜಂಕ್ಷನ್ ವರೆಗೆ ರಾಜಕುಮಾರಿ ರಸ್ತೆ ಎಂದು ಆನಂತರದ ರಸ್ತೆಗೆ ಕೆ.ಆರ್ ಎಸ್ ರಸ್ತೆ ಎಂದು ನಾಮಕರಣ ಮಾಡಿ, ನಾಮಫಲಗಳನ್ನು ಹಾಕಬೇಕೆಂದು ಮನವಿ ಮಾಡಿದ್ದಾರೆ.