ಮನೆ ರಾಜಕೀಯ ಈಶ್ವರಪ್ಪ ಮಾಡಿರುವ ಅನಾಹುತಗಳಿಗೆ ಕಾಲಾಪಾನಿ ಕುಡಿಸಬೇಕು: ಬಿ.ಕೆ.ಹರಿಪ್ರಸಾದ್

ಈಶ್ವರಪ್ಪ ಮಾಡಿರುವ ಅನಾಹುತಗಳಿಗೆ ಕಾಲಾಪಾನಿ ಕುಡಿಸಬೇಕು: ಬಿ.ಕೆ.ಹರಿಪ್ರಸಾದ್

0

ಶಿರಸಿ(Shirasi): ಈಶ್ವರಪ್ಪ ಮಾಡಿರುವ ಅನಾಹುತಗಳಿಗೆ ಕಾಲಾಪಾನಿ ಕುಡಿಸಬೇಕು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಸೂಕ್ತ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಪರಾಧ, ಭ್ರಷ್ಟಾಚಾರ ವೈಭವೀಕರಣ, ಹಗರಣದಲ್ಲಿ ರಾಷ್ಟ್ರದಲ್ಲೇ ಕೆ.ಎಸ್.ಈಶ್ವರಪ್ಪ ನಂಬರ್ ಒನ್ ಆಗಿದ್ದಾರೆ. ಅವರ ಮೇಲೆ ಸರಿಯಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಜಾರಿ ನಿರ್ದೇಶನಾಲಯ (ಇ.ಡಿ.) ಬಿಜೆಪಿ ಪಾಲಿನ ಎಲೆಕ್ಷನ್ ಡಿಪಾರ್ಟಮೆಂಟ್ ಆಗಿ ಪರಿವರ್ತನೆಯಾಗಿದೆ. ಸರ್ಕಾರದ ನಡೆ ಖಂಡಿಸುವ ಪ್ರಬಲ ನಾಯಕರನ್ನು ಗುರಿಯಾಗಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ತಪ್ಪಾಗಿ ನಡೆದುಕೊಂಡಿದೆ ಎಂದರು.

ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಮಾಡಿದ್ದ ಸರ್ಕಾರಿ ಆಸ್ತಿಯನ್ನು ಖಾಸಗಿ ಉದ್ಯಮಿಗಳಿಗೆ ಮಾರಿ ಮೋದಿ ಸರ್ಕಾರ ನಡೆಸುತ್ತಿದ್ದಾರೆ. ನ್ಯಾಶನಲ್ ಹೆರಾಲ್ಡ್ ಮಾರಾಟಕ್ಕೆ ಪರೋಕ್ಷ ಒತ್ತಡ ಹೇರಲು ಸೋನಿಯಾ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಲು ಮೋದಿ ಮುಂದಾಗಿದ್ದಾರೆ ಎಂದರು.

ಅಮಿತ್ ಶಾ ಮಗ ಜಯ್ ಶಾ ಅವರನ್ನು ಬಿಜೆಪಿ ಮೊದಲು ಇ.ಡಿ.ತನಿಖೆಗೆ ಒಳಪಡಿಸಲಿ. 2015ರಲ್ಲಿ ₹50 ಲಕ್ಷ ಆದಾಯ ಹೊಂದಿದ್ದ ಅವರು ಐಪಿಎಲ್ ವಹಿವಾಟಿನ ಮೂಲಕ ನೂರಾರು ಕೋಟಿ ಗಳಿಸಿದ್ದು ಹೇಗೆ ಎಂಬುದರ ಪತ್ತೆಯಾಗಲಿ ಎಂದ ಒತ್ತಾಯಿಸಿದರು.

ಭಿನ್ನಾಭಿಪ್ರಾಯವಿಲ್ಲ: ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ ಆಗಾಗ ಒಟ್ಟಿಗೆ ಕುಳಿತು ನಾಟಿ ಕೋಳಿ ಸಾರು, ಮುದ್ದೆ ಊಟ ಮಾಡುತ್ತಾರೆ ಎಂದರು.

ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕು:  ಕಸ್ತೂರಿ ರಂಗನ್ ಇಸ್ರೋ ಅಧ್ಯಕ್ಷರಾಗಿದ್ದವರು. ಸ್ಯಾಟಲೈಟ್ ಮೂಲಕ ಸರ್ವೆ ಮಾಡಿ ಪಶ್ಚಿಮ ಘಟ್ಟ ಪೂರ್ತಿ ಕಾಡು ಎಂಬ ತಪ್ಪು ವರದಿ ನೀಡಿದ್ದಾರೆ. ಈ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸಬೇಕು ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ, ನಾಗರಾಜ ನಾರ್ವೇಕರ್, ಜಗದೀಶ ಗೌಡ, ಅಬ್ಬಾಸ್ ತೊನ್ಸೆ ಇದ್ದರು.