ಮನೆ ಅಪರಾಧ ನೆಲಮಂಗಲದಲ್ಲಿ ಆಟೋಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ : ಮೂವರ ದಾರುಣ ಸಾವು.!

ನೆಲಮಂಗಲದಲ್ಲಿ ಆಟೋಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ : ಮೂವರ ದಾರುಣ ಸಾವು.!

0

ನೆಲಮಂಗಲ : ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಶಾಂತಿನಗರ ಗ್ರಾಮದ ಬಳಿ ಭಯಾನಕ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯಂತೆ, ಹಾಸನ – ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಂತಿನಗರ ಗ್ರಾಮದ ಬಳಿ ಈ ಭೀಕರ ಅಪಘಾತ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಶ್ರೀನಿವಾಸ್ ಹಾಗೂ ಪುಟ್ಟಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರೊಂದಿಗೆ ಪ್ರಯಾಣಿಸುತ್ತಿದ್ದ 13 ವರ್ಷದ ಬಾಲಕಿ ವರ್ಷಿಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ್ದಾಳೆ.

ಘಟನೆಯಲ್ಲಿ ಮತ್ತೊಬ್ಬ ಬಾಲಕಿ ಲೇಖನ ಗಂಭೀರ ಗಾಯಗೊಂಡಿದ್ದು, ಜೀವಮರಣ ಹೋರಾಟ ನಡೆಸುತ್ತಿದ್ದಾಳೆ. ಆಟೋದಲ್ಲಿದ್ದ ನಾಗರತ್ನಮ್ಮ ಹಾಗೂ ವೆಂಕಟೇಶ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಶ್ರೀನಿವಾಸ್ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೌಕರರಾಗಿದ್ದು, ವಾಟರ್ ಮೆನ್ ಕೆಲಸ ಮಾಡಿಕೊಂಡು ಆಟೋ ಚಾಲಕರಾಗಿದ್ದರು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅವರು ಕುಟುಂಬದ ಸದಸ್ಯರೊಂದಿಗೆ ಆಟೋದಲ್ಲಿ ನೆಲಮಂಗಲ ನಗರಕ್ಕೆ ತೆರಳುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಆಟೋಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ನಿಲುಗಡೆಯಾಗಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲ ಸಂಚಾರಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಹಾಗೂ ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ತೀವ್ರ ಪ್ರಯತ್ನ ಮಾಡಿದ್ದಾರೆ.

ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು, ಬಸ್‌ ಚಾಲಕನ ಅಜಾಗರೂಕ ಹಾಗೂ ಅತಿವೇಗದ ಚಾಲನೆಯೇ ಈ ದುರಂತಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.