ಚಾಮರಾಜನಗರ: ಕೆಎಸ್ ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿರುವ ಘಟನೆ ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕರಂಗಶೆಟ್ಟಿ ಗ್ರಾಮದ ಸಮೀಪ ಇಂದು ನಡೆದಿದೆ.
ಕೊಳ್ಳೇಗಾಲ ಪಟ್ಟಣದಿಂದ ಮಂಗಲ, ಚನ್ನಾಲಿಂಗನಹಳ್ಳಿ, ಲೊಕ್ಕನಹಳ್ಳಿ ,ಒಡೆಯರಪಾಳ್ಯ ಮಾರ್ಗವಾಗಿ ಬೈಲೂರು ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿ ಸುಮಾರು ಐದಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ಬಸ್ ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಲೊಕ್ಕನಹಳ್ಳಿ ,ಒಡೆಯರಪಾಳ್ಯ ಬೈಲೂರು ಗ್ರಾಮದ ವಿವಿಧ ಶಾಲೆಗಳಿಗೆ ಶಿಕ್ಷಕರು, ಶಿಕ್ಷಕಿಯರು ವಿದ್ಯಾರ್ಥಿಗಳು ಪ್ರತಿದಿನ ಈ ಬಸ್ ನಲ್ಲಿ ತೆರಳುತ್ತಿದ್ದರು. ಇಂದು ಚಾಲಕನ ಬದಲು ನಿರ್ವಾಹಕ ಬಸ್ ಚಾಲನೆ ಮಾಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆರೋಪಿಸಿದ್ದಾರೆ.
ಬಸ್ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಲಗಡೆಗೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಕೇವಲ ಐದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಉಳಿದವರಿಗೆ ಮೂಳೆ ಹಾಗೂ ಹೊಟ್ಟೆ ಸೇರಿದಂತೆ ದೇಹದ ಒಳ ಭಾಗದಲ್ಲಿ ನೋವು ಕಾಣಿಸಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬಸ್ ಪಲ್ಟಿಯಾಗಿರುವ ಘಟನೆ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಜಮಾವಣಿಗೊಂಡು ಬಸ್ ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.