ಕೂಡಲಸಂಗಮ: ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಸೇರಿದಂತೆ ನಾಲ್ವರು ಸಚಿವರು ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಶುಕ್ರವಾರದಂದು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆಯ ಭಾಗವಾಗಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಸದಸ್ಯರಾಗಿರುವ ಕಂದಾಯ ಸಚಿವ ಆರ್.ಅಶೋಕ, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಯುವಜನ & ಕ್ರೀಡಾ ಸಚಿವ ನಾರಾಯಣಗೌಡ ಭಾಗವಹಿಸಿದ್ದರು.
ಹಂಪಿಯಿಂದ ಇಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ನಾಲ್ವರು ಸಚಿವರೂ ಮೊದಲಿಗೆ ಸಂಗಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. ನಂತರ ಇವರೆಲ್ಲರೂ ಐಕ್ಯ ಮಂಟಪಕ್ಕೆ ಇಳಿದು, ಅಲ್ಲಿರುವ ಬಸವಣ್ಣನವರ ಸಮಾಧಿಗೆ ಕೂಡ ಪೂಜೆ ಸಲ್ಲಿಸಿ, ನಮಿಸಿದರು. ಪೂಜಾ ವಿಧಿ ವಿಧಾನಗಳು ನೆರವೇರಿದ ನಂತರ ಇಲ್ಲಿನ ಪೂಜ್ಯರು ಸಚಿವರಿಗೆ ಪ್ರಸಾದ ಪ್ರದಾನ ಮಾಡಿದರು.
ಇದಕ್ಕೂ ಮುನ್ನ ಸಚಿವರ ತಂಡವನ್ನು ಸಾವಿರಾರು ಜನರು ಸಂಭ್ರಮ, ಸಡಗರಗಳಿಂದ ಬರ ಮಾಡಿಕೊಂಡರು.
ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ‘ಬಸವಣ್ಣನವರು ಕನ್ನಡ ನಾಡಿನ ಶಿಖರಪ್ರಾಯ ಸಾಧಕರಾಗಿದ್ದಾರೆ. ಅವರ ಐಕ್ಯ ಸ್ಥಳದಲ್ಲಿ ನಾಡಿನ ಮತ್ತೊಬ್ಬ ಪುಣ್ಯಪುರುಷ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಪೂರಕವಾಗಿ ಪವಿತ್ರ ಮೃತ್ತಿಕೆ ಸಂಗ್ರಹ ನಡೆದಿರುವುದು ಸಂತಸ ತಂದಿದೆ. ಇದು ಕನ್ನಡ ನಾಡನ್ನು ಒಗ್ಗೂಡಿಸುವ ಅಭಿಯಾನವಾಗಿದೆ ಎಂದರು.
ಬಳಿಕ ಸಚಿವರ ತಂಡವು ಇಲ್ಲಿಂದ ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ಪ್ರಯಾಣ ಬೆಳೆಸಿತು.