ಮನೆ ರಾಜ್ಯ ಮಂಡ್ಯ ಕ್ಷೇತ್ರಕ್ಕೆ ಕುಮಾರಣ್ಣನೇ ಮೈತ್ರಿ ಅಭ್ಯರ್ಥಿ: ಸಿ.ಎಸ್‌ ಪುಟ್ಟರಾಜು

ಮಂಡ್ಯ ಕ್ಷೇತ್ರಕ್ಕೆ ಕುಮಾರಣ್ಣನೇ ಮೈತ್ರಿ ಅಭ್ಯರ್ಥಿ: ಸಿ.ಎಸ್‌ ಪುಟ್ಟರಾಜು

0

ಮಂಡ್ಯ: ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರೇ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಲಿದ್ದು,ನಾನೇ ಚುನಾವಣೆಯ ನೇತೃತ್ವ ವಹಿಸುತ್ತೇನೆ.ಅತ್ಯಂತ ಪ್ರಚಂಡ ಬಹುಮತದಲ್ಲಿ ಅವರನ್ನು ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ತಿಳಿಸಿದ್ದಾರೆ.


ಗುರುವಾರ ಪಾಂಡವಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಅಷ್ಟೇ ಬರಲಿ ಅಂತಾ ಹೇಳಿದ್ದೇವೆ. ನಾವೇ ಓಡಾಡಿ ಗೆಲ್ಲಿಸುತ್ತೇವೆ.ಇಂದು ಚೆನ್ನೈನಲ್ಲಿ ಕುಮಾರಸ್ವಾಮಿಯವರ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಮೂರ್ನಾಲ್ಕು ದಿನದಲ್ಲಿ ರಾಜ್ಯಕ್ಕೆ ಬರಲಿದ್ದಾರೆ.ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಹೈಕಮಾಂಡ್ ಜೆಡಿಎಸ್‌ಗೆ ಯಾವ ಕ್ಷೇತ್ರಗಳು ಎಂದು ನಾಳೆ ಅಧಿಕೃತವಾಗಿ ಘೋಷಿಸುತ್ತದೆ. ಟಿಕೆಟ್ ಘೋಷಣೆ ಬಳಿಕ ಸುಮಲತಾ ಅವರೊಂದಿಗೂ ಮಾತಾನಾಡುತ್ತೇವೆ.ಎಲ್ಲರೂ ಒಗ್ಗಟ್ಟನಿಂದ ಹೋಗುತ್ತೇವೆ ಎಂದರು.
ಕಾಂಗ್ರೆಸ್ ನಾಯಕರು ಪುಟ್ಟರಾಜುಗೆ ಗಾಳ ಹಾಕಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ದೇವೇಗೌಡರ ಮನೆ ಮಗನಾಗಿದ್ದೇನೆ. ನನ್ನ ಕೊನೆ ಉಸಿರು ಇರುವವರೆಗೂ ದೇವೇಗೌಡರ ಮನೆ ಮಗನಾಗೆ ಇರ್ತಿನಿ ಎಂದರು.
ಸುಮಲತಾ ಅಂಬರೀಶ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೆ ರಾಜಕೀಯವಾಗಿ ವ್ಯತ್ಯಾಸಗಳು ಆಗಿವೆ, ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಮಿತ್ರರೂ ಅಲ್ಲಾ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದರು.
ಸ್ವಂತ ನಿರ್ಧಾರಗಳನ್ನ ಜೆಡಿಎಸ್ ಮಾಡಲು ಆಗ್ತಿಲ್ಲ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ಉತ್ತರಿಸಿದ ಅವರು, ಚಲುವರಾಯಸ್ವಾಮಿ ನಮ್ಮ ಹೆಡ್ ಮಾಸ್ಟರ್. ಚಲುವರಾಯಸ್ವಾಮಿ ಹೇಳಿದ ಹಾಗೆ ನಾವು ನಡೆದುಕೊಳ್ತಿವಿ.ಅವರಿಲ್ಲದೆ ನಾವು ಈಗ ಕಂಗಾಲಾಗಿದ್ದೇವೆ ಎಂದು ವ್ಯಂಗ್ಯವಾಡಿದರು.
ಸ್ಟಾರ್ ಚಂದ್ರು ಸ್ಥಳಿಯ ಅಭ್ಯರ್ಥಿ ಎಂದು ಮತ ಕೇಳ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಣ್ಣನ ತೋಟದ ಮನೆಗೆ 20 ನಿಮಿಷದ ಜರ್ನಿ ಅಷ್ಟೆ. ಸ್ಟಾರ್ ಚಂದ್ರು ಮನೆ ಇರೋದು ಡಾಲರ್ಸ್‌ ಕಾಲೋನಿಯಲ್ಲಿ.ಅವ್ರ ಮನೆಗೆ ಹೋಗಲು ಒಂದುವರೆ ಗಂಟೆ ಬೇಕು. ಯಾರು ದೂರದಲ್ಲಿದ್ದಾರೆ ಅಂತ ಮಂಡ್ಯ ಜನ ತೀರ್ಮಾನ ಮಾಡ್ತಾರೆ. ಮಂಡ್ಯ ಜನ ಕುಮಾರಣ್ಣನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಸ್ಟಾರ್ ಚಂದ್ರು ಯಾವುದೋ ದುಡ್ಡು ತಂದು ಟೆಂಪ್ರವರಿ ಮನೆ ಸೆಟಪ್ ಮಾಡಿದ್ರೆ ಮಂಡ್ಯ ಜನ ಮೆಚ್ಚಲ್ಲ ಎಂದರು.