ಮನೆ ರಾಜ್ಯ ಕುಶಾಲನಗರ: ಮಂಕುಬೂದಿ ಎರಚಿ ಮನೆಗಳ್ಳತನ

ಕುಶಾಲನಗರ: ಮಂಕುಬೂದಿ ಎರಚಿ ಮನೆಗಳ್ಳತನ

0

ಕುಶಾಲನಗರ: ಮಂಕುಬೂದಿ ಎರಚಿ ಮನೆ ಕಳ್ಳತನ ಮಾಡಿದ್ದಾರೆ ಎಂದು ಕೊಡಗಿನ ಎರಡು ಕುಟುಂಬಗಳು ಆರೋಪಿಸಿವೆ.

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಗುಡ್ಡೆ ಹೊಸೂರು ಗ್ರಾಮದ ಯಶ್ವಂತ್ ಮತ್ತು ಇಸ್ಮಾಯಿಲ್ ಎಂಬ ಇಬ್ಬರು ಗ್ರಾಮಸ್ಥರ ಮನೆಯಲ್ಲಿ ಕಳ್ಳತನ ನಡೆದಿದೆ.

ಇಸ್ಲಾಯಿಲ್​ ಎಂಬುವರು ಮೊನ್ನೆ ಭಾನುವಾರ ರಾತ್ರಿ ಎಂದಿನಂತೆ ತಮ್ಮ ಪತ್ನಿ ಜತೆ ಮನೆಯಲ್ಲಿ ಮಲಗಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಅವರಿಗೆ ಯಾರೋ ಬೆಡ್​ ರೂಂ ಬಾಗಿಲನ್ನು ತೆಗೆದಂತೆ ಭಾಸವಾಗಿದೆಯಂತೆ.

ಯಾರದು ಎಂದು ನೋಡಿದಾಗ ಪ್ರಖರವಾದ ಬೆಳಕು ಬಂದು ಮುಖದ ಮೇಲೆ ಏನೋ ಸಿಂಪಡಿಸದಂತೆ ಆಗಿದೆ. ಅವರ ಪತ್ನಿಗೂ ಇದೇ ಅನುಭವವಾಗಿದೆ. ಅವರಿಬ್ಬರಿಗೆ ಅದಷ್ಟೇ ನೆನಪಿರುವುದು. ಬೆಳಗ್ಗೆ ಮಗ ಬಂದು ಎಬ್ಬಿಸಿದಾಗ ಕಣ್ಣೆಲ್ಲಾ ಉರಿ ಉರಿ! ಮನೆಯ ಮಹಡಿಯಲ್ಲಿದ್ದ ರೂಂ ಗೆ ತೆರಳಿ ನೋಡಿದಾಗ ಬೀರು ತೆರೆದಿದ್ದು ವಸ್ತಗಳು ಚೆಲ್ಲಾಪಿಲ್ಲಿಆಗಿರುವುದು ಕಂಡುಬಂದಿದೆ.

ಅದರಲ್ಲಿದ್ದ ಸುಮಾರು 45 ಗ್ರಾಂ ಚಿನ್ನ ಮತ್ತು 5 ಸಾವಿರ ರೂ ನಗದನ್ನು ಕದ್ದೊಯ್ದಿದ್ದಾರೆ. ರಾತ್ರಿ ಬಂದಿದ್ದ ಕಳ್ಳರು ಮನೆಯ ಹಿಂದಿನ ಬಾಗಿಲನ್ನ ಕಿಟಕಿ ಮೂಲಕ ದೊಣ್ಣೆಯಿಂದ ತೆಗೆದು ಒಳ ನುಗ್ಗಿರೋದು ಕಂಡು ಬಂದಿದೆ. ಒಳ ನುಗ್ಗಿ ಬಂದ ಕಳ್ಳರು ಮನೆ ಮಾಲೀಕ ಇಸ್ಮಾಯಿಲ್ ಮತ್ತು ಪತ್ನಿ ಮೇಲೆ ಮಂಕು ಬೂದಿ ಎರಚಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂಬುದು ಮನೆಯವರ ಆರೋಪ.

ಇವರ ಮನೆಗೆ ಆಗಮಿಸುವ ಮುನ್ನ ಕಳ್ಳರು ಇವರ ಮನೆಯಿಂದ ಅನತಿ ದೂರದಲ್ಲಿರುವ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಯಶ್ವಂತ್ ಅವರ ಒಂಟಿ ಮನೆಗೂ ನುಗ್ಗಿದ್ದಾರೆ. ಮನೆಯ ಹಿಂಬದಿಗೆ ಆಗಮಿಸಿರೋ ಕಳ್ಳರು ಕಿಟಕಿ ಮೂಲಕ ಮಹಡಿಗೆ ಹತ್ತಿ ಒಳನುಗ್ಗಲು ಯತ್ನಿಸಿದ್ದಾರೆ. ಆದ್ರೆ ಮನೆ ಗಟ್ಟಿಮುಟ್ಟಾಗಿದ್ದುದರಿಂದ ನುಗ್ಗಲು ಸಾಧ್ಯವಾಗಿಲ್ಲ. ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಗೇಟ್ ತೆಗೆದ ಶಬ್ಧ ಯಶ್ವಂತ್ ಅವರಿಗೆ ಕೇಳಿಸಿದೆ.

ಆದ್ರೆ ಒಬ್ಬರೇ ಇದ್ದುದರಿಂದ ಧೈರ್ಯವಾಗದೆ ಹೊರ ಬಂದಿಲ್ಲ. ಆದ್ರೆ ಬೆಳಗೆದ್ದು ನೋಡುವಾಗ ಕಾರಿನ ಡೋರ್ ಮತ್ತು ಕಳ್ಳರು ತಿರುಗಾಡಿದ ಕಡೆ ಒಂದಷ್ಟು ಭಸ್ಮದ ಮಾದರಿಯ ಪೌಡರ್ ಚೆಲ್ಲಿರುವುದು ಕಂಡು ಬಂದಿದೆ. ಮನೆಯ ದ್ವಾರ ಕಿಟಕಿಗಳಲ್ಲಿ ಆಗಂತುಕರ ಫಿಂಗರ್ ಪ್ರಿಂಟ್ ದೊರಕಿದೆ ಎಂದು ಘಟನೆಯ ಬಗ್ಗೆ ಯಶ್ವಂತ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ವಿವರಣೆ ನೀಡಿದ್ದಾರೆ.

ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.