ಮನೆ ಅಪರಾಧ ಕುಷ್ಟಗಿ: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ

ಕುಷ್ಟಗಿ: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ

0

ಕುಷ್ಟಗಿ: ಕಳೆದ 18 ವರ್ಷಗಳಿಂದ ಬೆಳೆಸಿದ್ದ ಶ್ರೀಗಂಧದ 13 ಮರಗಳನ್ನು ಕಳವು ಮಾಡಿದ ಪ್ರಕರಣ ತಾಲೂಕಿನ ನಡುವಲಕೊಪ್ಪ ಸೀಮಾದಲ್ಲಿ ಬೆಳಕಿಗೆ ಬಂದಿದೆ.

Join Our Whatsapp Group

ಕುಷ್ಟಗಿಯ ನಿವೃತ್ತ ಪ್ರೊಫೆಸರ್ ಎಸ್.ಬಿ. ಶಿವನಗುತ್ತಿ, ತಮ್ಮ ಜಮೀನಿನಲ್ಲಿ ತೇಗದ ಜೊತೆಗೆ ಶ್ರೀಗಂಧ ನಾಟಿ ಮಾಡಿದ್ದರು. ಸ.ನಂ.11/2 ರ 5 ಎಕರೆ 28 ಗುಂಟೆ ವಿಸ್ತೀರ್ಣದಲ್ಲಿ 4,500 ತೇಗ, 1 ಸಾವಿರ ಶ್ರೀಗಂಧವನ್ನು ಹನಿ ನೀರಾವರಿ ಆಶ್ರೀತವಾಗಿ ಬೆಳೆದಿದ್ದರು.

ಕಳೆದ 5 ವರ್ಷಗಳಿಂದ ಶ್ರೀಗಂಧದ ಮರಗಳಿಗೆ ಕಳ್ಳರ ಕಾಟ ಆಗಾಗ್ಗೆ ನಡೆಯುತ್ತಿದ್ದ ಹಿನ್ನೆಲೆ ಶೇ.50 ರಷ್ಟು ಶ್ರೀಗಂಧ ಕಳ್ಳರ ಪಾಲಾಗಿದೆ. ಸದ್ಯ 371 ಗಿಡಗಳು ಮಾತ್ರ ಉಳಿದಿದ್ದು ಇವುಗಳ‌ ಮೇಲೆ ಕಳ್ಳರ ಕಣ್ಣು ಬಿದ್ದಿದೆ‌. ಇನ್ನೇನು ಕೆಲ ದಿನಗಳಲ್ಲಿ ಶ್ರೀಗಂಧ ಕಟಾವಿಗೆ ಕರ್ನಾಟಕ ಸೋಪ್ ಡಿಟರ್ಜಂಟ್ ಲಿಮಿಟೆಡ್ ನೊಂದಿಗೆ ಒಪ್ಪಂದವಾಗಿತ್ತು. ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಗಿಡಗಳ ಕಟಾವು ಮಾತ್ರ ಬಾಕಿ ಇತ್ತು.

ಕಳೆದ ಬುಧವಾರ ತಡರಾತ್ರಿ 13 ಮರಗಳನ್ನು ಕಳ್ಳರು ಬುಡ ಸಮೇತ ನೆಲಕ್ಕುರುಳಿಸಿದ್ದಾರೆ. ಕಾಂಡದಲ್ಲಿ ಹಾಟ್ ವುಡ್ ಇರುವ ಎರಡು ಮರಗಳ ಕಾಂಡಗಳನ್ನು ಹೊತ್ತೊಯ್ದಿದ್ದಾರೆ. ಉಳಿದ 11 ಮರಗಳ‌ ಬುಡ ಕತ್ತರಿಸಿ ಹಾಗೆಯೇ ಬಿಟ್ಟಿದ್ದಾರೆ. ಕಳ್ಳರು ಬ್ಯಾಟರಿಚಾಲಿತ ಮಿಷನ್‌ ನಿಂದ ಕೊರೆದರೆ ಎಲ್ಲಿ ಶಬ್ದವಾಗುತ್ತದೆ ಎಂದು ಗರಗಸ ಇಲ್ಲವೇ ಎಕ್ಸೋ ಬ್ಲೇಡ್ ಬಳಸಿ ಮರಗಳನ್ನು ಕೆಡವಿರುವುದಾಗಿ ಶಂಕಿಸಲಾಗಿದೆ. ಈ ಪ್ರಕರಣದಲ್ಲಿ ವೃತ್ತಿ ನಿರತರಿಗೆ ಸ್ಥಳೀಯರು ಬೆಂಬಲಿಸಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಕ್ರೈಂ‌ ಪಿಎಸ್‌ಐ ಮಾನಪ್ಪ ವಾಲ್ಮೀಕಿ, 112 ವಾಹನ ಸಿಬ್ಬಂದಿ  ಪ್ರಾದೇಶಿಕ ವಲಯ ಪ್ರಭಾರ ಅರಣ್ಯಾಧಿಕಾರಿ ರಿಯಾಜ್ ಅಹ್ಮದ್, ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲಿಸಿ ತನಿಖೆಗೆ ಮುಂದಾಗಿದ್ದಾರೆ.

ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು,18 ವರ್ಷಗಳವರೆಗೆ  ಶ್ರೀಗಂಧ ಬೆಳೆದು ಇದೀಗ ಕಳ್ಳರ ಪಾಲಾಗಿದೆ‌ ರೈತರು ಸ್ವಂತ ಜಮೀನಿನಲ್ಲಿ ಶ್ರೀಗಂಧ ಬೆಳೆದರೂ ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಕಟಾವಣೆ ಮಾಡಬೇಕಿದೆ. ಸರ್ಕಾರದ ಬಿಗಿ ಕ್ರಮಗಳಿಂದ ಈ ಬೆಳೆ ಬೆಳೆದರೂ ಸ್ವತಂತ್ರವಾಗಿ ಮಾರಾಟಕ್ಕೆ ಆಸ್ಪದವಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು.

ಹಿಂದಿನ ಲೇಖನನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ
ಮುಂದಿನ ಲೇಖನಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು