ಕುಷ್ಟಗಿ: ಲೋಕೋಪಯೋಗಿ ಕಚೇರಿ ಆವರಣದಲ್ಲಿ ಕಸಕ್ಕೆ ಬೆಂಕಿ ತಗುಲಿ ಗುಜರಿ ಸೇರಬೇಕಿದ್ದ ಹಳೆಯ ವಾಹನಗಳು ಸುಟ್ಟು ಕರಕಲಾಗಿರುವ ಘಟನೆ ಏ.6ರ ಶನಿವಾರ ಬೆಳಗ್ಗೆ ನಡೆದಿದೆ.
ಇಲ್ಲಿನ ಮಾರುತಿ ವೃತ್ತದ ಬಳಿ ಇರುವ ತಾಲೂಕು ಪಂಚಾಯತಿ ವಾಣಿಜ್ಯ ಮಳಿಗೆ ಪಕ್ಕದಲ್ಲಿರುವ ಲೋಕೋಪಯೋಗಿ ಕಚೇರಿ ಆವರಣದಲ್ಲಿ ಇಲಾಖೆಯ ಹಳೆಯ ರೋಲರ್, ಟಿಪ್ಪರ್, ಜೀಪ್ ವಾಹನಗಳಿದ್ದವು.
ಈ ವಾಹನದ ಅಡಿಯಲ್ಲಿ ಕಸ ಹಾಕಲಾಗಿತ್ತು. ಕಸ ಸಕಾಲದಲ್ಲಿ ವಿಲೇವಾರಿ ಮಾಡದೇ ಕಸದ ರಾಶಿಗೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದರಿಂದ ವಾಹನ ಸಮೇತ ಸುಟ್ಟು ಕರಕಲಾಗಿದೆ.
ಬೆಂಕಿಯ ತೀವ್ರತೆಗೆ ಕಪ್ಪು ಹೊಗೆ ದಟ್ಟವಾಗಿ ಹರಡಿದ್ದರಿಂದ ಸಾರ್ವಜನಿರಲ್ಲಿ ಅತಂಕ ನಿರ್ಮಾಣವಾಗಿತ್ತು. ಅಲ್ಲದೇ ವಿದ್ಯುತ್ ತಂತಿಗೂ ಬೆಂಕಿ ಆವರಿಸಿತ್ತು. ಅಷ್ಟೋತ್ತಿಗೆ ಜೆಸ್ಕಾಂ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಯಾವುದೇ ಅವಘಡ ನಡೆಯಲಿಲ್ಲ.
ಅಗ್ನಿಶಾಮಕ ವಾಹನ ಸಕಾಲದಲ್ಲಿ ಆಗಮಿಸಿ ಬೆಂಕಿ ನಂದಿಸಿದೆ. ಗುಜರಿ ಸೇರಬೇಕಿದ್ದ ಲೋಕೋಪಯೋಗಿ ಇಲಾಖೆಯ ವಾಹನಗಳು ಸುಟ್ಟು ಕರಕಲಾಗಿದೆ.
ಬೆಂಕಿಯ ತೀವ್ರತೆಗೆ ತಾಲೂಕು ಪಂಚಾಯತಿ ವಾಣಿಜ್ಯ ಮಳಿಗೆಗಳಿಗೆ ಬಿಸಿ ತಾಗಿದ್ದು ಯಾವುದೇ ಹಾನಿಯಾಗಿಲ್ಲ. ಅಗ್ನಿಶಾಮಕ ಠಾಣೆಯ ಅಧಿಕಾರಿ ರಾಜು ನರಸಪ್ಪ ಅವರು ಕಸಕ್ಕೆ ಬೆಂಕಿ ತಗುಲಿದ್ದು, ಹಳೆಯ ವಾಹನ ಟೈರ್ ಸುಟ್ಟಿವೆ. ಯಾವುದೇ ಅನಾಹುತ ಆಗಿಲ್ಲ ಎಂದು ತಿಳಿಸಿದ್ದಾರೆ.