ಮೈಸೂರು: ದಾಖಲಾತಿ ವಾಪಾಸ್ ಹಿಂಪಡೆಯಲು 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕುವೆಂಪುನಗರ ಸಬ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕುವೆಂಪುನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಧಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು.
ಘಟನೆ ವಿವರ
ಕೆ.ಆರ್. ಮೊಹಲ್ಲಾದ ಸಿವಿಲ್ ಕಂಟ್ರಾಕ್ಟರ್ ಕೆ.ಬಿ ಮಹೇಶ್ ಅವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಚಿನ್ನಾಭರಣಗಳು, ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳು, ಬ್ಯಾಂಕ್ ಪಾಸ್ ಪುಸ್ತಕ, ಎಟಿಎಂ ಕಾರ್ಡ್ ಫೆಡರಲ್ ಬ್ಯಾಂಕ್ ಲಾಕರ್ ಕೀ, ಮೊಬೈಲ್ ಫೋನ್, ಕಾರ್ ನಂ.ಕೆ.ಎ.-41 ಜೆಡ್-9936 ಮತ್ತು ಕೆಎ-05 ಎಂ.ಜೆಡ್-9329 ಗಳನ್ನು ಕುವೆಂಪುನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಧಾ ವಶಕ್ಕೆ ಪಡೆದುಕೊಂಡಿದ್ದು, ಸದರಿ ವಸ್ತುಗಳನ್ನು ವಾಪಾಸ್ಸು ನೀಡುವಂತೆ ಕೇಳಿದಾಗ 2 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಧಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೆ.ಬಿ.ಮಹೇಶ್ ದೂರು ದಾಖಲಿಸಿದ್ದರು.
ಮೇ 30 ರಂದು ಕುವೆಂಪುನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಧಾ ಅವರು, ಪೊಲೀಸ್ ಠಾಣೆಯಲ್ಲಿ ಲಂಚದ ಹಣ 50 ಸಾವಿರ ರೂ. ಪಡೆದುಕೊಳ್ಳುವಾಗ ಮೈಸೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರಾಧಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದರಿ ಕಾರ್ಯಾಚರಣೆಯನ್ನು ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಮತ್ತು ಪೊಲೀಸ್ ಮಹಾನಿರೀಕ್ಷಕ ಸುಬ್ರಹ್ಮಣ್ಯೇಶ್ವರ ರಾವ್ ಮಾರ್ಗದರ್ಶನದಲ್ಲಿ ಪೊಲೀಸ್ ಅಧೀಕ್ಷಕ ಸಜೀತ್.ವಿ.ಜೆ, ಡಿವೈಎಸ್ ಪಿ ಕೃಷ್ಣಯ್ಯ, ಮಾಲತೀಶ್ ಅವರ ನೇತೃತ್ವದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಉಮೇಶ್ಮ ಜಯರತ್ನ, ರೂಪಶ್ರೀ, ರವಿಕುಮಾರ್, ಸಿಬ್ಬಂದಿಗಳಾದ ರಮೇಶ್, ಗೋಪಿ, ಕಾಂತರಾಜು, ಪ್ರಕಾಶ್, ಮೋಹನ್ ಗೌಡ, ವೀಣಾ, ಪುಷ್ಪಲತಾ, ದಿವ್ಯಶ್ರೀ, ನೇತ್ರಾವತಿ, ಪ್ರದೀಪ್, ಪರಶುರಾಮ, ಮೋಹನ್ ಲೋಕೇಶ್ ಭಾಗಿಯಾಗಿದ್ದರು.