ಮಲಯಾಳಂ ಹಿರಿಯ ನಟ ಮೋಹನ್ ಲಾಲ್ ಅಭಿನಯದ ಎಲ್2: ಎಂಪುರಾನ್ ಚಿತ್ರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೆಂಬಲ ವ್ಯಕ್ತಪಡಿಸಿದ್ದಾರೆ. “ಕೋಮುವಾದದ ವಿರುದ್ಧ ಈ ಸಿನಿಮಾದ ನಿರ್ಮಾಪಕರು ಅಳವಡಿಸಿಕೊಂಡ ನಿಲುವಿನ ಬಗ್ಗೆ ಸಂಘ ಪರಿವಾರ ‘ಭಯದ ವಾತಾವರಣ’ ಸೃಷ್ಟಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಮೋಹನ್ ಲಾಲ್ ನಟನೆಯ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ ಇತ್ತೀಚಿನ ಮಲಯಾಳಂ ಸಿನಿಮಾ ಎಲ್2: ಎಂಪುರಾನ್‌ನಲ್ಲಿ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ದೃಶ್ಯಗಳಿವೆ ಎಂಬ ಕಾರಣಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರೋಧ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ಸಿನಿಮಾ ತಂಡ 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ.
ಈ ನಡುವೆ ಪಿಣರಾಯಿ ವಿಜಯನ್ ಸಿನಿಮಾವನ್ನು ಶ್ಲಾಘಿಸಿದ್ದಾರೆ. “ಈ ಸಿನಿಮಾವು ದೇಶ ಕಂಡ ಅತ್ಯಂತ ಕ್ರೂರ ನರಮೇಧಗಳಲ್ಲಿ ಒಂದನ್ನು ಉಲ್ಲೇಖಿಸಿದೆ. ಇದು ಸಂಘ ಪರಿವಾರ ಮತ್ತು ಅದರ ಮಾಸ್ಟರ್‌ಮೈಂಡ್‌ಗಳನ್ನು ಕೆರಳಿಸಿದೆ” ಎಂದು ಆರೋಪಿಸಿದ್ದಾರೆ. ಮಲಯಾಳಂ ಚಲನಚಿತ್ರೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಚಿತ್ರ ಎಂಪುರಾನ್ ಎಂದು ಶ್ಲಾಘಿಸಿರುವ ವಿಜಯನ್, ಸಂಘ ಪರಿವಾರ ಚಿತ್ರ, ಅದರ ನಟರು ಮತ್ತು ಸಿಬ್ಬಂದಿಯ ವಿರುದ್ಧ ವ್ಯಾಪಕ ದ್ವೇಷದ ಅಭಿಯಾನ ನಡೆಸಿದ ಕಾರಣ ಈ ಸಿನಿಮಾವನ್ನು ವೀಕ್ಷಿಸಿದ್ದೇನೆ ಎಂದು ಹೇಳಿದರು.
“ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ನಾಯಕರು ಸಿನಿಮಾದ ನಿರ್ಮಾಪಕರ ವಿರುದ್ಧ ಸಾರ್ವಜನಿಕ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಈ ಒತ್ತಡದಲ್ಲಿ ನಿರ್ಮಾಪಕರು ಚಿತ್ರವನ್ನು ಮರು ಸೆನ್ಸಾರ್ ಮಾಡಲು ಮತ್ತು ಸಂಪಾದಿಸಲು ಒತ್ತಾಯಿಸಲಾಗುತ್ತಿದೆ ಎಂದು ವರದಿಗಳು ಬಂದಿವೆ. ಸಂಘ ಪರಿವಾರ ಸೃಷ್ಟಿಸಿರುವ ಈ ಭಯದ ವಾತಾವರಣ ಕಳವಳಕಾರಿ ವಿಷಯವಾಗಿದೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.