ಬೆಂಗಳೂರು: ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ನಡೆಯಬೇಕಾಗಿದ್ದ ಭೂಸ್ವಾಧೀನವನ್ನು ರೈತರ ಹಿತದೃಷ್ಟಿಯಿಂದ ಕೈಬಿಡಲಾಗಿದೆ. ಈ ಉದ್ಯಮಿಗಳಿಗೆ ಅವರು ಕೇಳಿದ ಕಡೆ ಭೂಮಿ ಕೊಡಲಾಗುತ್ತದೆ. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಆಹ್ವಾನ ಕೊಟ್ಟ ಮಾತ್ರಕ್ಕೆ ಯಾವ ಉದ್ಯಮಿಯೂ ಇಲ್ಲಿಂದ ಅಲ್ಲಿಗೆ ಹೋಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.
ನಾರಾ ಲೋಕೇಶ್ ಅವರ ಟ್ವೀಟ್ ಅನ್ನು ಗಮನಿಸಿದ್ದೇನೆ. ನಾನೂ ಉತ್ತರ ಕೊಟ್ಟಿದ್ದೇನೆ. ಎಂ ಬಿ ಪಾಟೀಲ್ ಗೂ ಸಾಮರ್ಥ್ಯವಿದೆ, ಕರ್ನಾಟಕ ರಾಜ್ಯವೂ ಸಮರ್ಥವಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಏರೋಸ್ಪೇಸ್ ಮಾತ್ರವಲ್ಲ, ಎಐ, ಡೀಪ್-ಟೆಕ್, ಐಟಿ ಹೀಗೆ ಎಲ್ಲಾ ತರಹದ ಉದ್ಯಮಗಳಿಗೂ ಭೂಮಿ ಲಭ್ಯವಿದೆ. ಯಾವುದೇ ಉದ್ಯಮಿಯನ್ನು ಕರ್ನಾಟಕದಿಂದ ಹೊರಹೋಗಲು ನಾನು ಬಿಡುವುದಿಲ್ಲ ಎಂದು ಹೇಳಿದರು.
ಏರೋಸ್ಪೇಸ್ ಉದ್ಯಮಿಗಳಿಗೆ ಬರೀ ಭೂಮಿಯಲ್ಲ, ಅದರ ಜತೆಗೆ ನೀರು, ವಿದ್ಯುತ್ ಎಲ್ಲವನ್ನೂ ಕೊಡುತ್ತೇವೆ. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನಮ್ಮ ಪಾಲಿನ ನೀರು ಬಳಸಿಕೊಳ್ಳಲು ರೂ.3,600 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನೆಯನ್ನೇ ರೂಪಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಉದ್ಯಮಿಗಳ ಪರವಾಗಿ ಮಾತನಾಡಲು ಆರಂಭಿಸಿದ್ದಾರೆ. ಒಂದು ವೇಳೆ ಸರಕಾರ ದೇವನಹಳ್ಳಿ ತಾಲ್ಲೂಕಿನಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರೆ, ಆಗ ಅವರು ರೈತರ ಪರವಾಗಿ ಮಾತನಾಡುತ್ತಿದ್ದರು. ವಿರೋಧ ಪಕ್ಷಗಳ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ರಾಜ್ಯದ ಹಿತಾಸಕ್ತಿ ಮಾತ್ರ ಮುಖ್ಯ ಎಂದರು.














