ದೆಹಲಿ: ಸಿಕ್ಕಿಂ ರಾಜ್ಯದ ಚಾಟೆನ್ ಪ್ರದೇಶದಲ್ಲಿರುವ ಸೇನಾ ಶಿಬಿರದಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೂಕುಸಿತದಿಂದಾಗಿ ಮೂವರು ಸೇನಾ ಸಿಬ್ಬಂದಿ ದುರ್ಮರಣಕ್ಕೊಳಗಾಗಿದ್ದು, ಇನ್ನೂ ಆರು ಮಂದಿ ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆ ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದ ಸಂಭವಿಸಿದ್ದು, ಸೇನಾ ಅಧಿಕಾರಿಗಳು ಹಾಗೂ ರಕ್ಷಣಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.
ರಕ್ಷಣಾ ಇಲಾಖೆಯ ಪ್ರಕಾರ, ಭೂಕುಸಿತ ಭಾನುವಾರ ಸಂಜೆ ಸುಮಾರು 7 ಗಂಟೆಯ ಸುಮಾರಿಗೆ ಸಂಭವಿಸಿದ್ದು, ಸಿಕ್ಕಿಂನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ಈ ದುರಂತಕ್ಕೆ ಕಾರಣವಾಗಿದೆ.
ಈವರೆಗೆ ಮೂರು ಶವಗಳನ್ನು ಪತ್ತೆಹಚ್ಚಲಾಗಿದೆ. ನಾಲ್ವರು ಸಿಬ್ಬಂದಿಗಳನ್ನು ಗಾಯದ ಸ್ಥಿತಿಯಲ್ಲಿ ರಕ್ಷಣೆ ಮಾಡಲಾಗಿದ್ದು, ಅವರಿಗೆ ಸ್ಥಳೀಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇನ್ನೂ ಆರು ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಅಗ್ನಿಶಾಮಕದಳ, ಸೇನಾ ಶೋಧ ಮತ್ತು ರಕ್ಷಣಾ ಪಡೆಗಳು ಹಗಲಿರುಳು ಕಾರ್ಯನಿರ್ವಹಿಸುತ್ತಿವೆ. ಶೋಧ ಕಾರ್ಯಾಚರಣೆಗೆ ನಿರಂತರ ಮಳೆ, ಕುಸಿಯುತ್ತಿರುವ ಮಣ್ಣು ಈ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.














