ಕೇರಳ: ವಯನಾಡಿನಲ್ಲಿ ಗುಡ್ಡ ಕುಸಿದಿದ್ದು 7 ಮಂದಿ ಸಾವನ್ನಪ್ಪಿದ್ದಾರೆ, 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಪಣರಾಯಿ ವಿಜಯ್ ಅವರ ಬಳಿ ಮಾತನಾಡಿದ್ದು, ಕೇಂದ್ರದಿಂದ ಸಾಧ್ಯವಾಗುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ವಯನಾಡಿನ ಕೆಲವು ಭಾಗಗಳಲ್ಲಿ ಭೂಕುಸಿತದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ, ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ, ಗಾಯಗೊಂಡವರು ಬೇಗ ಗುಣಮುಖರಾಗಲಿ. ಭೂಕುಸಿತದ ಕುರಿತು ಪಿಣರಾಯಿ ವಿಜಯ್ ಅವರೊಂದಿಗೆ ಮಾತನಾಡಿದ್ದೇನೆ ಎಲ್ಲಾ ನೆರವನ್ನು ನೀಡಲು ಕೇಂದ್ರ ಸಿದ್ಧವಿದೆ ಎಂದು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹಾಗೆಯೇ ಪ್ರಧಾನಿ ಮೋದಿ ಸುರೇಶ್ ಗೋಪಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಬಳಿಯೂ ಮಾತನಾಡಿದ್ದು, ಬಿಜೆಪಿ ಕಾರ್ಯಕರ್ತರನ್ನು ಕಳುಹಿಸಿ ಅವರಿಗೆ ಬೇಕಾದ ನೆರವು ಒದಗಿಸುವಂತೆ ಕೇಳಿದ್ದಾರೆ. ಸಚಿವ ಜಾರ್ಜ್ ಅವರ ಬಳಿಯೂ ಮಾತನಾಡಿದ್ದಾರೆ.
ವಿರೋಧ ಪಕ್ಷದ ನಾಯಕ ಮತ್ತು ವಯನಾಡ್‌ನ ಮಾಜಿ ಲೋಕಸಭಾ ಸಂಸದ ರಾಹುಲ್ ಗಾಂಧಿ, ವಯನಾಡಿಗೆ ಸಾಧ್ಯವಿರುವ ಎಲ್ಲ ನೆರವು ಕೋರಲು ಕೇಂದ್ರ ಸಚಿವರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ವಯನಾಡಿನ ಮೆಪ್ಪಾಡಿ ಬಳಿ ಸಂಭವಿಸಿದ ಭಾರಿ ಭೂಕುಸಿತದಿಂದ ನಾನು ತೀವ್ರವಾಗಿ ನೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಚುರಲಮಲದಿಂದ ಮುಂಡಕ್ಕೈಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದ್ದು, ಮುಂಡಕ್ಕೈಗೆ ಸಂಪರ್ಕ ಕಡಿತಗೊಂಡಿದೆ.
ಮಾಹಿತಿಯ ಪ್ರಕಾರ , ಭಾರೀ ಮಳೆಯ ನಂತರ ವಯನಾಡಿನಲ್ಲಿ ಭೂಕುಸಿತ ಸಂಭವಿಸಿದೆ. ಆರೋಗ್ಯ ಇಲಾಖೆ- ರಾಷ್ಟ್ರೀಯ ಆರೋಗ್ಯ ಮಿಷನ್ ತುರ್ತು ಸಹಾಯಕ್ಕಾಗಿ ನಿಯಂತ್ರಣ ಕೊಠಡಿಯನ್ನು ತೆರೆದಿದೆ ಮತ್ತು ಸಹಾಯವಾಣಿ ಸಂಖ್ಯೆಗಳನ್ನು 9656938689 ಮತ್ತು 8086010833 ನೀಡಿದೆ.