ಲಖನೌ (Lucknow):ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರತೆಯಲ್ಲಿನ ಲೋಪಕ್ಕಾಗಿ 8 ಮಂದಿ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಓರ್ವ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 8 ಮಂದಿ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಸ್ವಾಗತಿಸಲು ಗೋರಕ್ ಪುರ ವಿಮಾನ ನಿಲ್ದಾಣಕ್ಕೆ ಯೋಗಿ ಆದಿತ್ಯನಾಥ್ ಶುಕ್ರವಾರ ತೆರಳುತ್ತಿರುವಾಗ ಭದ್ರತೆಯಲ್ಲಿ ಲೋಪ ಉಂಟಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಎಂಟು ಪೊಲೀಸರನ್ನು ಗೋರಕ್ ಪುರ ಎಸ್ ಎಸ್ ಪಿ ವಿಪಿನ್ ತಾಡಾ ಅಮಾನತು ಮಾಡಿದ್ದಾರೆ.
ಶುಕ್ರವಾರ ಬೆಳಿಗ್ಗೆ 11.28 ಸುಮಾರಿನಲ್ಲಿ ಜೆ.ಪಿ. ನಡ್ಡಾ ಅವರನ್ನು ಬರಮಾಡಿಕೊಳ್ಳಲು ಸಿಎಂ ಗೋರಕ್ ಪುರ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕುಶ್ಮಾಹಿ ರಸ್ತೆಯಿಂದ ಅನೇಕ ವಾಹನಗಳು ಸಿಎಂ ಎದುರಿಗೆ ಬಂದಿದ್ದವು. ಈ ಘಟನೆ ಸಂಬಂಧ ತನಿಖೆಗೆ ಆದೇಶಿಸಿದ್ದ ತಾಡಾ, ಲೋಪ ಕಂಡುಬಂದ ಹಿನ್ನೆಲೆಯಲ್ಲಿ 8 ಪೊಲೀಸರನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.