ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ 3ನೇ ಗ್ಯಾರಂಟಿ ಯೋಜನೆಯಾಗಿರುವ ಅನ್ನ ಭಾಗ್ಯ ಯೋಜನೆಗೆ ಇಂದು ಸಂಜೆ 5 ಗಂಟೆಗೆ ರಾಜ್ಯ ಸರ್ಕಾರ ಚಾಲನೆ ನೀಡಲಿದೆ.
ಇದರಲ್ಲಿ ಫಲಾನುಭವಿಗಳ ಅಕೌಂಟ್ ಗೆ 170 ರೂಪಾಯಿ ಹಣ ಜಮಾವಣೆ ಆಗಲಿದೆ.
ಯೋಜನೆಯ ರೂಪರೇಷೆ ಪ್ರಕಾರ ಸರ್ಕಾರ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ನೀಡಬೇಕಿತ್ತು. ಇದರಲ್ಲಿ 5 ಕಿಲೋ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಉಳಿದ 5 ಕಿಲೋ ಅಕ್ಕಿ ಲಭ್ಯವಿಲ್ಲದ ಕಾರಣ ಅಕ್ಕಿ ಬದಲಿಗೆ 1 ಕೆಜಿಗೆ 34 ರೂಪಾಯಿಯಂತೆ 5 ಕಿಲೋ ಅಕ್ಕಿಗೆ 170 ರೂ. ನೀಡಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಬಜೆಟ್ ನಲ್ಲೂ ಸಿಎಂ ಸಿದ್ದರಾಮಯ್ಯ ಹಣ ಮೀಸಲಿಟ್ಟಿದ್ದಾರೆ.
ರಾಜ್ಯದಲ್ಲಿ ಸುಮಾರು 1.29 ಕೋಟಿ ಬಿಪಿಎಲ್ ಕಾರ್ಡ್ ಗಳು ಬಳಕೆಯಲ್ಲಿವೆ. ಬಿಪಿಎಲ್ ಕಾರ್ಡ್ ಆಧಾರದಲ್ಲಿ 4.41 ಕೋಟಿ ಫಲಾನುಭವಿಗಳು ಈ ಯೋಜನೆಯನ್ನು ಅವಲಂಬಿಸಿದ್ದಾರೆ. ಇದರಲ್ಲಿ ಪ್ರತಿಯೊಬ್ಬನ ಅಕೌಂಟ್ ಗೆ ಮಾಸಿಕ 170 ರೂ. ಬರಲಿದೆ. 2023-24ನೇ ಹಣಕಾಸು ವರ್ಷಕ್ಕೆ ಬಜೆಟ್ ನಲ್ಲಿ ತಿಂಗಳಿಗೆ 856.25 ಕೋಟಿ ರೂ.ನಂತೆ 10,275 ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ.