ಚೆನ್ನೈ(Chennai): ಹೈದರಾಬಾದ್ ಮೂಲದ ಸ್ಟಾರ್ಟಪ್ ಕಂಪನಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಬೆಳಿಗ್ಗೆ 11.30ರ ಸುಮಾರಿಗೆ ಉಡಾವಣೆಗೊಂಡಿದೆ.
ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ, ದಿವಂಗತ ವಿಕ್ರಮ್ ಸಾರಾಭಾಯ್ ಅವರ ಗೌರವಾರ್ಥವಾಗಿ ರಾಕೆಟ್‌ಗೆ ವಿಕ್ರಮ್–ಎಸ್ ಎಂದು ಹೆಸರಿಡಲಾಗಿದೆ.
ನಾಲ್ಕು ವರ್ಷ ಹಿಂದೆ ಆರಂಭವಾಗಿದ್ದ ಸ್ಟಾರ್ಟಪ್ ಸ್ಕೈರೂಟ್ ಏರೋಸ್ಪೇಸ್ ಚೊಚ್ಚಲ ವಿಕ್ರಮ್-ಎಸ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದು ದೇಶದ ಬಾಹ್ಯಾಕಾಶ ಉದ್ಯಮಕ್ಕೆ ಖಾಸಗಿ ವಲಯದ ಮೊದಲ ಸೇರ್ಪಡೆಯಾಗುವ ಮೂಲಕ ಇತಿಹಾಸ ಬರೆದಿದೆ.
ಈ ಮಿಷನ್‌ಗೆ ‘ಪ್ರಾರಂಭ’ಎಂದು ಹೆಸರಿಡಲಾಗಿದೆ. ಸ್ಪೇಸ್ ಕಿಡ್ಸ್ ಇಂಡಿಯಾ, ಎನ್–ಸ್ಪೇಸ್ ಟೆಕ್ ಇಂಡಿಯಾ ಮತ್ತು ಅರ್ಮೇನಿಯಾದ ಬಜೂಮ್ಕ್‌ನ ತಲಾ ಒಂದು ಮಾದರಿಯನ್ನು ಈ ರಾಕೆಟ್ ಕೊಂಡೊಯ್ದಿದೆ.
2018 ರಲ್ಲಿ ಇಸ್ರೋದ ಮಾಜಿ ವಿಜ್ಞಾನಿಗಳಾದ ಪವನ್ ಕುಮಾರ್ ಚಂದನ ಮತ್ತು ನಾಗಾ ಭಾರತ್ ಡಾಕಾ ಅವರು ಸ್ಥಾಪಿಸಿದ ಹೈದರಾಬಾದ್ ಮೂಲದ ಸ್ಟಾರ್ಟ್-ಅಪ್ ಸ್ಕೈರೂಟ್ ಏರೋಸ್ಪೇಸ್, ಇಂಗಾಲದ ಸಂಯೋಜಿತ ರಚನೆಗಳು ಮತ್ತು 3ಡಿ-ಮುದ್ರಿತ ಘಟಕಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಎರಡು ವರ್ಷಗಳಲ್ಲಿ ವಿಕ್ರಮ್-ಎಸ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಅತ್ಯಾಧುನಿಕ ಏವಿಯಾನಿಕ್ಸ್ ಮತ್ತು ಆಲ್-ಕಾರ್ಬನ್ ಫೈಬರ್ ಕೋರ್ ರಚನೆಯನ್ನು ಹೊಂದಿದೆ.