ಮನೆ ರಾಜಕೀಯ ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿ: ಬಿ.ಎಲ್.ಸಂತೋಷ್‌

ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿ: ಬಿ.ಎಲ್.ಸಂತೋಷ್‌

0

ಮೈಸೂರು (Mysuru)-ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ (B.L.Santhosh) ಹೇಳಿದ್ದಾರೆ. ಇದರಿಂದ ರಾಜ್ಯ ಸಚಿವ ಸಂಪುಟದಲ್ಲಿ, ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಮತ್ತಷ್ಟು ಮಹತ್ತರ ಬದಲಾವಣೆಯಾಗುತ್ತದೆಯೇ? ಎಂಬ ಪ್ರಶ್ನೆ ಉದ್ಭವಸಿದೆ.

ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ನಗರದ ಖಾಸಗಿ ಹೋಟೆಲ್‌ ನಲ್ಲಿ ನಿನ್ನೆ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿಯಾಗಿದೆ. ಈ ಪ್ರಯೋಗ ಗುಜರಾತ್‍ನಲ್ಲೂ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಈ ರೀತಿ ಹೇಳಿಕೆ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಕುತೂಹಲ ಹುಟ್ಟಿಸಿದೆ.

ಬಿಜೆಪಿಯಲ್ಲಿ ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ನಡೆಸುತ್ತೇವೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂದಿದ್ದಾರೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನು ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಎಂದು ಹೇಳಿದ್ದಾರೆ. 

ಕಾಲ ಕಾಲಕ್ಕೆ ತಕ್ಕಂತೆ ಸಮಾಜದ ಬದಲಾವಣೆಗೆ ಸ್ಪಂದಿಸಿ ಪರಿಷ್ಕರಣೆಯಾಗದಿದ್ದಲ್ಲಿ ಅಂತಹ ಪಕ್ಷ ನಾಶವಾಗಲಿದೆ. ‘ಬದಲಾವಣೆಗೆ ತಕ್ಕಂತೆ ಬಿಜೆಪಿ ಬದಲಾಗುತ್ತದೆ. ಆದರೆ, ಕಾಂಗ್ರೆಸ್‌ ಹಾಗೆಯೇ ಇದ್ದು, ಯುವನಾಯಕರು ಯಾರು ಎಂದರೆ ಸೋನಿಯಾಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಎನ್ನುತ್ತಾರೆ. ಆದರೆ, ಬಿಜೆಪಿಯಲ್ಲಿ ಇಂತಹ ಉದಾಹರಣೆಗಳು ವಿರಳ. ಕಾರ್ಯಕರ್ತರೇ ನಾಯಕರಾಗುವ ಅವಕಾಶ ಇಲ್ಲಿದೆ. ಹಾಗಾಗಿಯೇ, ಬಿಜೆಪಿ ಗಟ್ಟಿಯಾಗುತ್ತಿದ್ದರೆ, ಕಾಂಗ್ರೆಸ್‌ ಅವಸಾನದ ಅಂಚನ್ನು ತಲುಪಿದೆ. ಇದರಿಂದಲೇ ಅನೇಕ ನಾಯಕರು ಬಿಜೆಪಿಯತ್ತ ಮುಖಮಾಡಿದ್ದಾರೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದ 11 ಸ್ಥಾನದಲ್ಲಿ ಕನಿಷ್ಠ 8 ಸ್ಥಾನವಾದರೂ ಗೆಲ್ಲಬೇಕು. ಇಂತಹವರಿಗೆ ಟಿಕೆಟ್‌ ಕೊಡಿ ಎಂದು ಕೇಳಿ ಅವರ ಹಿಂದೆಯೇ ಓಡಾಡಬೇಡಿ. ಯಾರಿಗೆ ಟಿಕೆಟ್‌ ಲಭಿಸಿದರೂ ಅವರ ಪರವಾಗಿ ಕೆಲಸ ಮಾಡಿ. ಮುಂದೊಂದು ದಿನ ನೀವೂ ನಾಯಕರಾಗುವಿರಿ ಎಂದು ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಿದರು.