ಮನೆ ರಾಜಕೀಯ ನಾಯಕತ್ವ ಗುಣ ಡಿಎನ್‌ಎನಲ್ಲೇ ಇದೆ: ನಿರ್ಮಲಾನಂದನಾಥ ಸ್ವಾಮೀಜಿ

ನಾಯಕತ್ವ ಗುಣ ಡಿಎನ್‌ಎನಲ್ಲೇ ಇದೆ: ನಿರ್ಮಲಾನಂದನಾಥ ಸ್ವಾಮೀಜಿ

0

ಮೈಸೂರು(Mysuru): ನಾಯಕತ್ವ ಗುಣ ಡಿಎನ್‌ಎನಲ್ಲೇ ಇದೆ. ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲಾರರು. ಹೀಗಾಗಿ, ನಾವು ಸಮಾಜದ ಚರಿತ್ರೆ, ವಿಶೇಷತೆಗಳನ್ನು ತಿಳಿದುಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಪಾದಿಸಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದಿಂದ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಮತ್ತು ಒಕ್ಕಲಿಗ ರಾಜಮನೆತನದ ಇತಿಹಾಸ’ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಮಾತನಾಡಿದರು.

ನಮ್ಮ ನಾಯಕರು ದೇಶ ಹಾಗೂ ರಾಜ್ಯವನ್ನು ಆಳಿದ್ದಾರೆ. ನಾಯಕತ್ವದ ಹಾಗೂ ಆಡಳಿತ ನಡೆಸುವ ಗುಣವು ನಮಗೆ ಪ್ರಜಾಪ್ರಭುತ್ವದ‌ ನಂತರ ಬಂದದ್ದಲ್ಲ; ಸಮಾಜದವರ ಡಿಎನ್‌ಎನಲ್ಲೇ ಅದು ಬಂದಿದೆ. ಹೀಗಾಗಿ ನಾಡನ್ನು ಆಳುವ ಹಂಬಲವನ್ನು ನಮ್ಮ ನಾಯಕರು ಆಗಾಗ ವ್ಯಕ್ತಪಡಿಸುತ್ತಾರೆ. ಅವರನ್ನು ನಾವು ಬೆಂಬಲಿಸಬೇಕು ಎಂದು ತಿಳಿಸಿದರು.

ತಲಕಾಡು ಗಂಗರು– ನಾವೆಲ್ಲವೂ‌ ಒಂದೇ. ಉಪ ಪಂಗಡಗಳು ಭೇದ ತೊರೆದು, ಆಡಳಿತದಲ್ಲಿ ಮುಂದೆ ಬರುವ ನಾಯಕರನ್ನು ಬೆಂಬಲಿಸಬೇಕು. ಒಕ್ಕಲಿಗರಿಗೆ ಅಧಿಕಾರ ಸಿಕ್ಕಾಗ ಎಲ್ಲ ಸಮಾಜದವರನ್ನೂ ಸಮಾನವಾಗಿ ನೋಡುತ್ತಾರೆ. ಸ್ವಾಭಿಮಾನವು ನಮ್ಮ ರಕ್ತದಲ್ಲಿಯೇ ಇರುವಂತಹ ಗುಣ ಎಂದು

ಮಠದಿಂದ ಸಮಾಜದ 108 ಸಾಧಕರ ಪುಸ್ತಕಗಳನ್ನು ಹೊರತರಲು ಯೋಜನೆ ರೂಪಿಸಲಾಗಿದೆ. ಈಗಾಗಲೇ 54 ಪುಸ್ತಕಗಳು ಹೊರಬಂದಿವೆ. ಇನ್ನೂ 54 ಮಂದಿಯ ಕುರಿತು ಪ್ರಕಟಿಸಲಾಗುವುದು. ಅವುಗಳನ್ನು ಮಕ್ಕಳಿಗೆ ಓದಿಸಬೇಕು. ಒಕ್ಕಲಿಗರು ಕುರಿಗಳಲ್ಲ, ನಾಡನ್ನಾಳಿದ ಸಿಂಹಗಳು ಎಂಬುದನ್ನು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

ಕೆಂಪೇಗೌಡರು ಹಾಗೂ ಗಂಗರಸರನ್ನು ಬೇರೆಯಾಗಿ ನೋಡಲಾಗದು; ಬೇರ್ಪಡಿಸಲೂ ಆಗದು. ಅದು ಗಡಿಗೆ‌ ಸೀಮಿತವಾದುದಲ್ಲ ಎಂದು ಹೇಳಿದರು.

ಸ್ವಾಭಿಮಾನದ ಸಮಾಜ ನಮ್ಮದು

ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಒಕ್ಕಲಿಗ ಸಮಾಜಕ್ಕೆ ಕೊಟ್ಟು ಅಭ್ಯಾಸವೇ‌ ಹೊರತು ತೆಗೆದುಕೊಂಡು ಗೊತ್ತಿಲ್ಲ. ಸ್ವಾಭಿಮಾನದ ಸಮಾಜ ನಮ್ಮದು ಎಂದು ಹೇಳಿದರು.

ರಾಜಧಾನಿ ಬೆಂಗಳೂರು ಬೆಳೆದಿದ್ದರೆ, ಸರ್ಕಾರವು ವರಮಾನ ಕಾಣುತ್ತಿದ್ದರೆ ಮತ್ತು ಅದನ್ನು ನಾಡಿಗೆ ಹಂಚುತ್ತಿದ್ದರೆ ಅದಕ್ಕೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಕಾರಣವಾಗಿದೆ ಎಂದು ಸ್ಮರಿಸಿದರು.

ನಾಡಪ್ರಭು ಬೆಂಗಳೂರು ನಗರದ ನಿರ್ಮಾರ್ತೃಗಳು. ಸಮಾಜದ ರಣಭೈರೇಗೌಡ ಮತ್ತು ಕೆಂಪೇಗೌಡರ ವಂಶಸ್ಥರ ಕೊಡುಗೆ ಅನನ್ಯವಾದುದು. ಕೆಂಪೇಗೌಡರು ಬೆಂಗಳೂರನ್ನು ಕಟ್ಟದೆ ಇದ್ದಿದ್ದರೆ ರಾಜ್ಯ ಹೇಗಿರುತ್ತಿತ್ತು ಎನ್ನುವುದನ್ನು ಯೋಚಿಸಬೇಕು. ದೂರದೃಷ್ಟಿ ಹೊಂದಿದ್ದ ಅವರು ಸಾವಿರ ಕೆರೆಗಳನ್ನು ನಿರ್ಮಿಸಿದ್ದರು. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಅವುಗಳನ್ನು ಮುಚ್ಚಿದ್ದೇವೆ ಎಂದು ವಿಷಾದಿಸಿದರು.

ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಕೆಂಪೇಗೌಡರು ಕಟ್ಟಿದ್ದ ಕೆರೆಗಳನ್ನು ಹಾಗೂ ರಾಜಕಾಲುವೆಗಳನ್ನು ಉಳಿಸಿಕೊಂಡಿದ್ದರೆ ಬೆಂಗಳೂರಿನಲ್ಲಿ ಸಮಸ್ಯೆಗಳೇ ಇರುತ್ತಿರಲಿಲ್ಲ ಎಂದರು.

ಸಾಹಿತಿ ಡಾ.ಲತಾ ರಾಜಶೇಖರ್ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ.ಮಳಲಿ ವಸಂತ್‌ಕುಮಾರ್‌ ವಿರಚಿತ ‘ನಾಡಪ್ರಭು ಕೆಂಪೇಗೌಡ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ಗೌರವಾಧ್ಯಕ್ಷ ಸಿ.ಪಿ.ಕೃಷ್ಣಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಕಾಂಗ್ರೆಸ್ ಮುಖಂಡ ಹರೀಶ್‌ ಗೌಡ, ಡಾ.ವಸಂತಕುಮಾರ್‌ ತಿಮಕಾಪುರ ಇದ್ದರು.