ಮನೆ ರಾಜಕೀಯ ಕಾಫಿ ಒತ್ತುವರಿ ಜಮೀನನ್ನು ಕಾಯ್ದೆ ಪ್ರಕಾರ ಲೀಸ್‌ಗೆ ನೀಡಿ, ಇಲ್ಲದಿದ್ದರೆ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ...

ಕಾಫಿ ಒತ್ತುವರಿ ಜಮೀನನ್ನು ಕಾಯ್ದೆ ಪ್ರಕಾರ ಲೀಸ್‌ಗೆ ನೀಡಿ, ಇಲ್ಲದಿದ್ದರೆ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ

0

ಹಾಸನ: ಕಾಫಿ ಬೆಳೆಯ ಒತ್ತುವರಿ ಜಮೀನನ್ನು ಲೀಸ್‌ಗೆ ನೀಡಲು ಹಿಂದಿನ ಬಿಜೆಪಿ ಸರ್ಕಾರ ತಂದ ಕಾಯ್ದೆಯನ್ನು ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಸಚಿವನಾಗಿದ್ದಾಗ 30-40 ವರ್ಷಗಳಿಂದ ಕಾಫಿ ಬೆಳೆಯುತ್ತಿರುವವರಿಗೆ ಒತ್ತುವರಿ ಜಮೀನು ಲೀಸ್‌ಗೆ ನೀಡುವ ಕ್ರಮವನ್ನು ತಂದಿದ್ದೆ. 30 ವರ್ಷ ಸರ್ಕಾರಕ್ಕೆ ಶುಲ್ಕ ಪಾವತಿಸುವುದು, ಜಮೀನು ಸ್ವಾಧೀನ ಸೇರಿದಂತೆ ಹಲವು ಷರತ್ತುಗಳನ್ನೊಳಗೊಂಡ ಕಾಯ್ದೆ ಜಾರಿಗೊಳಿಸಲಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ದ್ವೇಷದ ರಾಜಕಾರಣ ಮಾಡಿ ಇದನ್ನು ಜಾರಿ ಮಾಡುತ್ತಿಲ್ಲ. ಕೊಡಗು, ಹಾಸನ, ಚಿಕ್ಕಮಗಳೂರು, ಮಂಗಳೂರಿನ ಕೆಲ ಭಾಗಗಳಲ್ಲಿ ಕಾಫಿ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಕೇರಳದಲ್ಲಿ ಕೂಡ ಇದೇ ಮಾದರಿಯಲ್ಲಿ ಜಮೀನು ನೀಡಲಾಗಿದೆ. ನಾನು ಕೈಗೊಂಡ ಕ್ರಮದಿಂದ ಸರ್ಕಾರಕ್ಕೆ 200-300 ಕೋಟಿ ರೂ. ಆದಾಯ ಬರುತ್ತದೆ. ಕೂಡಲೇ ಸರ್ಕಾರ ಮತ್ತೆ ಲೀಸ್‌ಗೆ ಜಮೀನು ನೀಡಬೇಕು. ಇಲ್ಲವಾದರೆ ಬೆಳೆಗಾರರು ಹೋರಾಟ ಮಾಡಲಿದ್ದಾರೆ. ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದರು.

ಜಿಲ್ಲಾಧಿಕಾರಿಗಳು ಬೆಳೆಗಾರರಿಂದ ಶುಲ್ಕ ಪಾವತಿಸಿಕೊಳ್ಳಬೇಕು. ಸರ್ಕಾರಕ್ಕೆ ಬೇಕಾದ ಜಮೀನನ್ನು ಪಡೆದು ಉಳಿದ ಜಮೀನನ್ನು ಲೀಸ್‌ಗೆ ನೀಡಬಹುದು. ಇದೇ ರೀತಿ ಬೇನಾಮಿಯಾಗಿ ಇದ್ದರೆ ಸರ್ಕಾರಕ್ಕೂ ಆದಾಯವಿರುವುದಿಲ್ಲ, ಸರ್ಕಾರದ ಸ್ವತ್ತು ಎಂಬುದಕ್ಕೂ ದಾಖಲಾತಿ ಇರುವುದಿಲ್ಲ. ಈಗ ಕೇವಲ ಒತ್ತುವರಿ ಎಂದೇ ಇದೆ. ಮುಂದೆ ಸಮಸ್ಯೆಯಾದರೆ ಇಡೀ ಜಮೀನು ಸರ್ಕಾರದ ಕೈ ತಪ್ಪಬಹುದು. ಬೆಳೆಗಾರರು ಕೃಷಿಗೆ ಕೊಡುಗೆ ನೀಡುತ್ತಿದ್ದು, ಅವರಿಗೂ ಸರ್ಕಾರದಿಂದ ಅನುಕೂಲವಾಗುತ್ತದೆ ಎಂದರು.

ಜ್ಞಾನವಾಪಿಯಲ್ಲಿ ಭವ್ಯ ಮಂದಿರವಾಗಲಿ

ಮುಸ್ಲಿಂ ದಾಳಿಕೋರರು ದೇಗುಲ ನಾಶ ಮಾಡಿ ಮಸೀದಿ ಕಟ್ಟಿಸಿದ ಉದಾಹರಣೆ ಸಾಕಷ್ಟಿದೆ. ಅಯೋಧ್ಯೆಯಲ್ಲೂ ಹೀಗೆಯೇ ಆಗಿತ್ತು. ಅಲ್ಲಿ ರಾಮ ಮಂದಿರ ನಿರ್ಮಾಣವಾದಂತೆಯೇ ಜ್ಞಾನವಾಪಿಯಲ್ಲಿ ಭವ್ಯವಾದ ಶಿವ ಮಂದಿರ ನಿರ್ಮಾಣವಾಗಲಿ. ಇದು ಎನ್‌ಡಿಎ ಸರ್ಕಾರದ ಅವಧಿಯಲ್ಲೇ ಆಗಲಿ ಎಂದರು.

ಕೆರೆಗೋಡಿನಲ್ಲಿ ಹಿಂದಿನಿಂದಲೂ ದೇವಾಯಲಯದ ಬಳಿ ಹನುಮ ಧ್ವಜವನ್ನು ಹಾರಿಸಲಾಗುತ್ತಿತ್ತು. ಅಲ್ಲದೆ 22 ಹಳ್ಳಿಗಳ ಜನರು 6 ಲಕ್ಷ ರೂ. ಸಂಗ್ರಹಿಸಿ ಈ ಸ್ತಂಭ ನಿರ್ಮಿಸಿದ್ದಾರೆ. ಸ್ತಂಭದ ಉದ್ಘಾಟನೆಗೆ ಕರೆದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ ಮುಖಂಡರು ವಿವಾದ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಹನುಮ ಧ್ವಜ ತೆಗೆದು ರಾಷ್ಟ್ರಧ್ವಜ ಹಾರಿಸಬೇಕು ಎಂಬುದು ಯಾವುದೇ ಕಾನೂನಲ್ಲಿ ಇಲ್ಲ. ಹಿಂದೆ ಹುಬ್ಬಳ್ಳಿಯಲ್ಲಿ, ಕಾಶ್ಮೀರದಲ್ಲಿ ಕಾಂಗ್ರೆಸ್‌ ನಾಯಕರು ರಾಷ್ಟ್ರಧ್ವಜ ಹಾರಿಸಲಿಲ್ಲ. ರಾಷ್ಟ್ರಧ್ವಜ ಹಾರಿಸುವಾಗಲೆಲ್ಲ ಕಾಂಗ್ರೆಸ್‌ ಸರ್ಕಾರ ಲಾಠಿ ಚಾರ್ಜ್‌ ಮಾಡಿಸಿತ್ತು ಎಂದರು.

ರಾಷ್ಟ್ರಪತಿಯವರನ್ನು ಗೌರವವಿಲ್ಲದೆ ಕರೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆ ಸ್ಥಾನದಲ್ಲಿ ಕೂರುವ ಅರ್ಹತೆ ಇಲ್ಲ. ಅದು ಮಾತಿನ ಭರ ಎನ್ನುವುದಾದರೆ ಸೋನಿಯಾ ಗಾಂಧಿಯವರ ಬಗ್ಗೆಯೂ ಮಾತಾಡಲಿ. ಹಾಗೆ ಮಾತಾಡಿದರೆ ಇವರು ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಹಣ ಮುಟ್ಟಬಾರದು ಎಂದು ಕಾನೂನು ತಂದು ಈಗ ಅದನ್ನೇ ಗ್ಯಾರಂಟಿಗೆ ಬಳಸುತ್ತಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಅವರು ಗ್ಯಾರಂಟಿ ನೀಡಿ ಹಾಲು, ಲಿಕ್ಕರ್‌, ವಿದ್ಯುತ್‌ ದರ ಹೆಚ್ಚಿಸಿದರು. ದರ ಹೆಚ್ಚಳದಿಂದ ಒಂದು ಕುಟುಂಬದ ವೆಚ್ಚ 3 ಸಾವಿರ ರೂ. ಹೆಚ್ಚಳವಾಗಿದೆ. ಆದರೆ ಇವರು ಮಹಿಳೆಯರಿಗೆ 2 ಸಾವಿರ ರೂ. ನೀಡುತ್ತಿದ್ದಾರೆ. ಉಳಿದ 1 ಸಾವಿರ ರೂ. ರಾಹುಲ್‌ ಗಾಂಧಿಗೆ ನೀಡಲು ಜೇಬಿಗೆ ಇಳಿಸಿಕೊಂಡಿದ್ದಾರೆ. ಇದೇ ಎಟಿಎಂ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮೂಲಕ ಕೊಡುಗೆ ನೀಡುವ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಜೆಟ್‌ ಮೂಲಕ ಕೊಡುಗೆ ನೀಡಲಿದ್ದಾರೆ ಎಂದರು.

ಹಿಂದಿನ ಲೇಖನಕ್ರೆಡಲ್ ಅಧ್ಯಕ್ಷರಾಗಿ ಟಿಡಿ ರಾಜೇಗೌಡ ಪದಗ್ರಹಣ
ಮುಂದಿನ ಲೇಖನಕೇಂದ್ರ ಬಜೆಟ್ ಬಗ್ಗೆ ಜನರಿಗೆ ನಿರೀಕ್ಷೆಯೇ ಇಲ್ಲ: ಈಶ್ವರ ಖಂಡ್ರೆ