ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ರಜೆ ನೀಡದಂತೆ ಹಾಗೂ ಕೇಂದ್ರ ಸ್ಥಾನದಲ್ಲಿಯೇ ಕಾರ್ಯ ನಿರ್ವಹಿಸಲು ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಪಾಲ್ಗೊಂಡಿದ್ದರು. ಸಭೆ ಬಳಿಕ ಮಾಧ್ಯಮ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಅವರು, “ಸದ್ಯ ಪರಿಸ್ಥಿತಿ ಗಂಭೀರವಾಗಿಲ್ಲ, ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ” ಎಂದು ಹೇಳಿದರು.
ಮಕ್ಕಳಿಗೆ ಜ್ವರ, ಶೀತ, ನೆಗಡಿ ಇದ್ದರೆ ಅವರನ್ನು ಶಾಲೆಗೆ ಕಳಿಸಬಾರದು ಎಂಬುದು ಈಗ ಪ್ರಮುಖ ಎಚ್ಚರಿಕೆಯ ಸಲಹೆಯಾಗಿದೆ. ಶಾಲಾ ಆಡಳಿತ ಮಂಡಳಿಗಳಿಗೆ ಈ ಬಗ್ಗೆ ವಿಶೇಷ ಸೂಚನೆ ನೀಡಲಾಗುತ್ತಿದ್ದು, ಪೋಷಕರಿಗೂ ಜವಾಬ್ದಾರಿ ನೀಡಲಾಗಿದೆ. ಸರ್ಕಾರ ಈ ಬಗ್ಗೆ ಮಾರ್ಗಸೂಚಿಗಳನ್ನು ಕೂಡಾ ಹೊರಡಿಸಲಿದೆ.
ರಾಜ್ಯಾದ್ಯಂತ 5 ಸಾವಿರ RTPCR ಟೆಸ್ಟಿಂಗ್ ಕಿಟ್‌ಗಳನ್ನು ಹಂಚಲಾಗಿದ್ದು, ಇನ್ನೂ ಹೆಚ್ಚಿನ ಕಿಟ್‌ಗಳು ನಾಳೆಯೊಳಗೆ ತಲುಪಲಿವೆ. ಹೃದಯ ಸಂಬಂಧಿ ಸಮಸ್ಯೆ ಮತ್ತು ಉಸಿರಾಟದ ತೊಂದರೆ ಇರುವವರು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕೆಂದು ಸೂಚಿಸಲಾಗಿದೆ. ಇದು ಕೋವಿಡ್ ಒಮೆಕ್ರಾನ್ ಜೆ.ಎನ್ 1 ತಳಿಯಾಗಿದ್ದು, ಸೌಮ್ಯ ಸ್ವಭಾವದ ಲಕ್ಷಣಗಳನ್ನ ಹೊಂದಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡರು, ಗಂಭೀರವಾಗಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ರೆಮ್ಡಿಸಿವಿರ್ ಇಂಜೆಕ್ಷನ್‌ಗಳ ಖರೀದಿಗೆ ಸರ್ಕಾರ ಸೂಚನೆ ನೀಡಿದೆ. ಜೊತೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್, ಔಷಧಿ ಮತ್ತು ವೈದ್ಯಕೀಯ ಸಿಬ್ಬಂದಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ.
ಪ್ರತೀ ವಾರ ಅಥವಾ ಅಗತ್ಯ ಬಂದರೆ ಮೂರು ದಿನಕ್ಕೊಮ್ಮೆ ತಜ್ಞರ ಸಮಿತಿ ಸಭೆ ನಡೆಸಿ ನಿರಂತರ ಪರಿಶೀಲನೆ ನಡೆಸಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಕೊರೋನಾ ಸಹಾಯವಾಣಿ ಲೋಕಾರ್ಪಣೆ ಮಾಡುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.














