ಮನೆ ಕಾನೂನು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಇಂದು ಸುಪ್ರೀಂನಿಂದ ಮಹತ್ವದ ತೀರ್ಪು

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಇಂದು ಸುಪ್ರೀಂನಿಂದ ಮಹತ್ವದ ತೀರ್ಪು

0

ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. ಸಲಿಂಗ ವಿವಾಹಗಳನ್ನು ವಿಶೇಷ ವಿವಾಹ ಕಾಯ್ದೆಯಡಿ ತಂದು ನೋಂದಣಿ ಮಾಡುವಂತೆ ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಆಗ್ರಹ ಕೇಳಿಬಂದಿದೆ.

2018 ರಲ್ಲಿ, ಸುಪ್ರೀಂ ಕೋರ್ಟ್‌ ನ ಸಂವಿಧಾನ ಪೀಠವು ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವ ಐಪಿಸಿಯ ಸೆಕ್ಷನ್ 377 ರ ಭಾಗವನ್ನು ರದ್ದುಗೊಳಿಸಿದೆ.

ಈ ಕಾರಣದಿಂದಾಗಿ, ಇಬ್ಬರು ವಯಸ್ಕರ ನಡುವಿನ ಒಮ್ಮತದ ಸಲಿಂಗಕಾಮಿ ಸಂಬಂಧಗಳನ್ನು ಇನ್ನು ಮುಂದೆ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸಲಿಂಗ ವಿವಾಹವನ್ನು ಅನುಮೋದಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠ (ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನು ಒಳಗೊಂಡಂತೆ) ಹತ್ತು ದಿನಗಳ ವಿಚಾರಣೆಯ ನಂತರ ಈ ವರ್ಷ ಮೇ 11 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಸಲಿಂಗ ವಿವಾಹವನ್ನು ವಿರೋಧಿಸಿತು ಮತ್ತು ಇದು ನಗರ ಚಿಂತನೆಯಾಗಿದೆ ಎಂದು ಹೇಳಿತ್ತು. ಇದು ದೊಡ್ಡ ನಗರಗಳಲ್ಲಿ ವಾಸಿಸುವ ಕೆಲವು ಗಣ್ಯ ವ್ಯಕ್ತಿಗಳಿಂದ ಬೇಡಿಕೆಯಿದೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಹೇಳಿತ್ತು.

ಈ ಕುರಿತು ಸಿಜೆಐ ಚಂದ್ರಚೂಡ್ ಅವರು, ಸಲಿಂಗ ವಿವಾಹದ ಬೇಡಿಕೆಯು ನಗರ ವರ್ಗಕ್ಕೆ ಮಾತ್ರ ಸೀಮಿತವಾಗಿದೆ ಎಂಬುದನ್ನು ತೋರಿಸುವ ಯಾವುದೇ ಡೇಟಾ ಸರ್ಕಾರದ ಬಳಿ ಇಲ್ಲ ಎಂದು ಹೇಳಿದ್ದರು.

ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ನ್ಯಾ. ಭಟ್ ಅವರು ಸಾಂವಿಧಾನಿಕ ಸಿದ್ಧಾಂತವನ್ನು ನಾವು ಉಳಿಸಿಕೊಂಡು ಬಂದಿದ್ದೇವೆ. ಈ ಪ್ರಕರಣದಲ್ಲಿ ನ್ಯಾಯಾಲಯವು ನೀತಿಯ ರಚನೆ ಕುರಿತು ಶಾಸಕಾಂಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಮತ್ತು ನೀತಿ ರಚನೆಯ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅರ್ಜಿಯಲ್ಲೇನಿತ್ತು? ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು. ಇದಕ್ಕೆ ಪೂರಕವಾಗಿ 1954ರ ವಿಶೇಷ ವಿವಾಹ ಕಾಯ್ದೆಯನ್ನು ಮರು ವ್ಯಾಖ್ಯಾನಿಸಬೇಕು. ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 4 (ಸಿ) ಪುರುಷ ಮತ್ತು ಮಹಿಳೆಯ ವಿವಾಹಕ್ಕೆ ಮಾತ್ರ ಮಾನ್ಯತೆ ನೀಡುತ್ತದೆ. ಇದರಿಂದ ಸಲಿಂಗ ಜೋಡಿಗೆ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದಿರುವುದು ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕುಗಳ ನಿರಾಕರಣೆಯಾಗಿದೆ ಎಂದು ಹೇಳಲಾಗಿತ್ತು.

ಹಿಂದಿನ ಲೇಖನಎಂಬಿಎ ಮಾಡಿದವರಿಗೆ ಇಲ್ಲಿದೆ ನೋಡಿ ನಿಮಗೆ ಇಷ್ಟವಾಗುವ ಕೆಲಸ
ಮುಂದಿನ ಲೇಖನಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ರಕ್‌: ನಾಲ್ವರು ಸಜೀವ ದಹನ