ಮೈಸೂರು(Mysuru): ಇಷ್ಟು ದಿನ ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ನಗರದ ಮಧ್ಯಭಾಗದಲ್ಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಜೆ ಸಿ ನಗರದಲ್ಲಿ ಚಿರತೆ ದಾಳಿ ಮಾಡಿದ್ದು, ಬೆಳ್ಳಂಬೆಳಗ್ಗೆ ಕರುವಿನ ಮೇಲೆ ಮುಗಿಬಿದ್ದು ಪ್ರಾಣ ತೆಗೆದಿದೆ.
ಕರುವಿನ ಮೇಲೆ ದಾಳಿ ಮಾಡಿ ಕ್ಷಣಾರ್ಧದಲ್ಲಿ ಪರಾರಿಯಾದ ಚಿರತೆಯನ್ನು ಹಲವರು ನೋಡಿ ಭಯಭೀತರಾಗಿದ್ದಾರೆ. ಚಾಮುಂಡಿಬೆಟ್ಟದ ಕಿರು ಅರಣ್ಯದಿಂದ ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ಎಸ್ ಎ ರಾಮದಾಸ್, ಮೇಯರ್ ಶಿವಕುಮಾರ್ ಕೂಡ ಭೇಟಿ ನೀಡಿ ವಾಸ್ತವ ಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಜೆ ಸಿ ನಗರದಲ್ಲಿ ನೂರಾರು ಮನೆ ಇದೆ. ಈ ಹಿಂದೆಯೂ ಹಲವು ಭಾರಿ ಚಿರತೆ ಕಾಣಿಸಿಕೊಂಡಿತ್ತು. ಆದ್ರೆ, ಕಳೆದ ಹಲವು ತಿಂಗಳಿಂದ ಜನರಲ್ಲಿ ಚಿರತೆ ಭಯ ಮಾಯವಾಗಿತ್ತು. ಕಳೆದ 1 ತಿಂಗಳಿಂದ ಮತ್ತೆ ಚಿರತೆ ಭೀತಿ ಶುರುವಾಗಿದ್ದು, ಈಗ ಕರುವಿನ ಮೇಲೆ ದಾಳಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ತಕ್ಷಣವೇ ಚಿರತೆ ಸೆರೆಗೆ ಮನವಿ ಮಾಡಿದ್ದಾರೆ .