ಮೈಸೂರು: ತಂಬಾಕು ರಹಿತ ದಿನವೆಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ 365 ದಿನವೂ ತಂಬಾಕು ರಹಿತ ದಿನವಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ ವಿ ರಾಜೇಂದ್ರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇ ಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಎನ್.ಸಿ.ಡಿ ಕೋಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಜೆಎಸ್ಎಸ್ ಶುಶ್ರೂಷ ಶಾಲೆ, ಬಿಜಿಎಸ್ ಅಪೋಲೋ ಶುಶ್ರೂಷ ಕಾಲೇಜು, ಶ್ರೀ ಗೋಪಾಲಗೌಡ ಶಾಂತವೇರಿ ಮೆಮೋರಿಯಲ್ ಶುಶ್ರೂಷ ಕಾಲೇಜು, ಮೈಸೂರು ಹಾಗೂ ಪೃಥ್ವಿ ಇನ್ಫ್ರಾಸ್ಟ್ರಕ್ಚರ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಅರಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ತಂಬಾಕು ರಹಿತ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಜನತೆ ತಂಬಾಕು ಚಟಕ್ಕೆ ಬಲಿಯಾಗದೆ ತಮ್ಮ ಜೀವನ ಶೈಲಿಯನ್ನ ಸುಗಮ ರೀತಿಯಲ್ಲಿ ನಡೆಸಬೇಕು. ಶಾಲಾ ಕಾಲೇಜುಗಳ ಸುತ್ತಲೂ ತಂಬಾಕು ಮುಕ್ತ ವಲಯ ಫಲಕಗಳನ್ನು ಅಳವಡಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯು ಕೋಟ್ಪಾ ಕಾಯ್ದೆಯ ಉಲ್ಲಂಘನೆ ಯಾಗುವುದಲ್ಲದೆ ತಂಬಾಕು ಸೇವನೆ ಮಾಡದೆ ಇರುವ ವ್ಯಕ್ತಿಯ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.
ತಂಬಾಕು ಸೇವನೆಯು ಸ್ಲೋ ಪಾಯಿಸನ್ ಆಗಿರುವುದರಿಂದ ಅದರ ಚಟಕ್ಕೆ ಬಲಿಯಾದವರು ಅದರಿಂದ ಹೊರ ಬಂದು ಸುಭದ್ರ ಆರೋಗ್ಯ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಿನೇಶ್ ಬಿಜಿ ಅವರು ಮಾತನಾಡಿ, ತಂಬಾಕು ಸೇವನೆಯೂ ಕ್ಯಾನ್ಸರ್ ಕಾರಕ ರೋಗಗಳನ್ನು ಉಂಟು ಮಾಡುವುದರಿಂದ ಅದನ್ನು ತ್ಯಜಿಸುವುದು ಉತ್ತಮವಾಗಿದೆ ಹಾಗೂ ತುಂಬಾಕನ್ನು ಬೆಳೆಯುವ ರೈತರಿಗೆ ಪರ್ಯಾಯವಾಗಿ ಬೇರೆ ಬೆಳೆಗಳನ್ನು ಬೆಳೆಯಲು ಉತ್ತೇಜವನ್ನು ನೀಡಬೇಕು ಎಂದು ತಿಳಿಸಿದರು.
4.5 ಟ್ರಿಲಿಯನ್ ಸಿಗರೇಟ್ ನ ಬಳಸಿದ ತುಂಡುಗಳು ಪರಿಸರಕ್ಕೆ ಸೇರಿ ಪ್ರಕೃತಿಯನ್ನು ಕಲುಷಿತಗೊಳಿಸುತ್ತವೆ, ತಂಬಾಕು ಬೆಳೆಯುವುದು ವರ್ಷಕ್ಕೆ 200 ಹೆಕ್ಟರ್ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಪ್ರಸಾದ್ ಅವರು ಮಾತನಾಡಿ “ನಮಗೆ ತಂಬಾಕು ಬೇಡ ಆಹಾರ ಬೇಕು” ಎಂಬ ಧ್ಯೇಯ ವಾಕ್ಯದೊಂದಿಗೆ 2023 ರ ತಂಬಾಕು ರಹಿತ ದಿನವನ್ನು ಆಚರಿಸುತ್ತಿದ್ದು, ತಂಬಾಕಿನ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಮನುಷ್ಯನಿಗೆ ಇರುವ ಆರೋಗ್ಯವು ತುಂಬಾ ಅಮೂಲ್ಯವಾದದ್ದು ಅದನ್ನು ನಮ್ಮ ಕೈಯಾರ ಹಾಳು ಮಾಡಿಕೊಳ್ಳದೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮದೇ ಆಗಿದೆ ಎಂದರು.
ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ಅಡಗೂರು ಎಂಬ ಗ್ರಾಮದಲ್ಲಿ ಮುಂಚೆ ಹೆಚ್ಚಾಗಿ ತಂಬಾಕನ್ನು ಬೆಳೆಯಲಾಗುತ್ತಿತ್ತು ಆದರೆ ಈಗ ಈ ಗ್ರಾಮವು ತಂಬಾಕು ಮುಕ್ತ ಗ್ರಾಮವಾಗಿ ಹೊರಹೊಮ್ಮಿರುವುದು ಖುಷಿಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಾದ ಡಾ. ಮಹದೇವ ಪ್ರಸಾದ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳಾದ ಸಿರಾಜ್ ಅಹಮದ್, ಜಿಲ್ಲಾ ತುಂಬಾಕು ನಿಯಂತ್ರಣದ ಸಲಹೆಗಾರರಾದ ಶಿವಕುಮಾರ್ ಜಿ, ಐ.ಇ.ಸಿ ಅಧಿಕಾರಿಗಳು, ಹಾಗೂ ರೈತ ಮುಖಂಡರಾದ ವಸಂತ್, ಪ್ರಗತಿಪರ ರೈತರಾದ ಸುಪ್ರೀತ್ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.