ಮನೆ ರಾಜಕೀಯ ರಮೇಶ್‌ ಕುಮಾರ್‌ ಹೇಳಿಕೆ ಆಧರಿಸಿ ತನಿಖೆ ನಡೆಯಲಿ: ಸಚಿವ ಡಾ.ಕೆ.ಸುಧಾಕರ್‌

ರಮೇಶ್‌ ಕುಮಾರ್‌ ಹೇಳಿಕೆ ಆಧರಿಸಿ ತನಿಖೆ ನಡೆಯಲಿ: ಸಚಿವ ಡಾ.ಕೆ.ಸುಧಾಕರ್‌

0

ಬೆಂಗಳೂರು(Bengaluru): ಕಾಂಗ್ರೆಸ್‌ ನಾಯಕರು ಮೂರು-ನಾಲ್ಕು ತಲೆಮಾರುಗಳಿಗಾಗುವಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರೇ ಜಗಜ್ಜಾಹೀರು ಮಾಡಿದ್ದಾರೆ. ಈ ಮೂಲಕ ರಮೇಶ್‌ ಕುಮಾರ್‌ ಅವರೇ ಕಾಂಗ್ರೆಸ್‌ನ ವ್ಯರ್ಥ ಹೋರಾಟಕ್ಕೆ ತಿಲಾಂಜಲಿ ನೀಡಿದ್ದಾರೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್‌ ನಾಯಕರು ಹಗರಣ, ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಮಾಡಿದ ತಪ್ಪಿನಲ್ಲಿ ತಮ್ಮ ಪಾಲು ಇದೆ ಎಂಬುದನ್ನು ಹೇಳಿದ್ದಾರೆ. ಅನೇಕ ನಾಯಕರು ಗಾಂಧಿ ಕುಟುಂಬದ ಹೆಸರಲ್ಲಿ, ವಂಶಾಡಳಿತದಿಂದ ಸಾಕಷ್ಟು ಹಣ ಮಾಡಿದ್ದಾರೆ ಎಂದಿದ್ದಾರೆ. ರಮೇಶ್‌ ಕುಮಾರ್‌ ಅವರು ಬಹಳ ಹಿಂದಿನ ಹಿರಿಯ ನಾಯಕರು. ಸ್ಪೀಕರ್‌ ಆಗಿ ಅವರು ಹೇಗೆ ನಾಟಕವಾಡಿದರು, ಆದೇಶವನ್ನು ಮಾಧ್ಯಮಗಳ ಮುಂದೆ ಹೇಗೆ ಉಲ್ಲೇಖ ಮಾಡಿದ್ದಾರೆ ಎಂಬುದನ್ನು ಈಗಾಗಲೇ ತಿಳಿಸಿದ್ದೇನೆ. ದೇಶದಲ್ಲಿ ಯಾವ ಸ್ಪೀಕರ್‌ ಕೂಡ ಮಾಡದ ಘನಂದಾರಿ ಕೆಲಸವನ್ನು ಅವರು ಮಾಡಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.

ತನಿಖೆಗೆ ಆಗ್ರಹ:

ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯವರನ್ನು ತನಿಖೆ ಮಾಡಬಾರದು ಎಂದು ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗ ರಮೇಶ್‌ ಕುಮಾರ್‌ ಅವರ ಹೇಳಿಕೆಯಿಂದ ಹಗರಣ ನಡೆದಿರುವುದು ಸ್ಪಷ್ಟವಾಗಿದೆ. ಆದ್ದರಿಂದ ತನಿಖಾ ಏಜೆನ್ಸಿಗಳು ಕೂಡಲೇ ಇವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಬೇಕು. ರಮೇಶ್‌ಕುಮಾರ್‌ ಅವರ ಮೇಲೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದರೆ ಎಂಬುದು ಹೊರ ಬರಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸಚಿವರು ಆಗ್ರಹಿಸಿದರು.

ಹಿಂದೆ ಪೊಲೀಸ್‌ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ  ಬಿ ರಿಪೋರ್ಟ್‌ ಸಲ್ಲಿಸಿ ಕೆ.ಜೆ.ಜಾರ್ಜ್‌ ಅವರನ್ನು ಆರೋಪ ಮುಕ್ತಗೊಳಿಸಲಾಗಿತ್ತು. ಈಶ್ವರಪ್ಪ ಅವರ ತನಿಖೆ ಮಾಡಿದ ಸಂಸ್ಥೆಯೇ ಜಾರ್ಜ್‌ ಅವರ ತನಿಖೆಯನ್ನೂ ಮಾಡಿತ್ತು. ಇದನ್ನೂ ಕೂಡ ಕಾಂಗ್ರೆಸ್‌ ಪ್ರಶ್ನೆ ಮಾಡಲಿ. ಸರ್ಕಾರ ಏನೇ ಮಾಡಿದರೂ ಕಾಂಗ್ರೆಸ್‌ ವಿರೋಧಿಸುತ್ತದೆ ಎಂದರು.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಒಕ್ಕಲಿಗರ ವಿಶ್ವಾಸ ಕಳೆದುಕೊಂಡಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನೇ ಒಕ್ಕಲಿಗರು ಬೆಂಬಲಿಸಲಿದ್ದಾರೆ. ಆದರೆ ಬಿಜೆಪಿ ಜಾತಿ ಆಧಾರಿತ ಪಕ್ಷವಲ್ಲ. ಸಮಾಜದ ಎಲ್ಲಾ ಜನವರ್ಗಗಳ ಕಲ್ಯಾಣವನ್ನು ಬಿಜೆಪಿ ಬಯಸುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ, ಒಕ್ಕಲಿಗ, ಲಿಂಗಾಯಿತ, ಹಿಂದುಳಿದ ವರ್ಗ ಸೇರಿದಂತೆ ಎಲ್ಲರಿಗೂ ಬಿಜೆಪಿ ಅಭಿವೃದ್ಧಿಯ ಭರವಸೆ ನೀಡುತ್ತದೆ ಎಂದರು. 

ಕೋವಿಡ್‌ ಸಾಂಕ್ರಾಮಿಕ ಬಂದ ಸಮಯದಲ್ಲಿ ಕೇಂದ್ರ ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿ ನೀಡಲು ಆರಂಭಿಸಿದೆ. ಇದು ಜನಪರವಾಗಿರಬೇಕು ಹಾಗೂ ಬಡವರಿಗೆ ತಲುಪಬೇಕು. ಹೆಚ್ಚು ಅಕ್ಕಿ ಬಂದಾಗ ಅದನ್ನು ಕೆಲವರು ಮಾರಾಟ ಮಾಡಿರುವುದು ಕಂಡುಬಂದಿದೆ. ಬಡವರಿಗೆ ಕೊಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.