ಸರಿಯಾದ ವಿರಾಮವಿಲ್ಲದೆ ಹಗಲು-ರಾತ್ರಿ ಕೆಲಸ ಮಾಡುವಂತೆ ಆಯಾಗಳನ್ನು (ಆರೈಕೆದಾರರು, ಶುಶ್ರೂಷಕರು) ಒತ್ತಾಯಿಸುವುದು ನಿರಂಕುಶ ಮತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಹಕ್ಕುಗಳ ಉಲ್ಲಂಘನೆ ಎಂದು ತಿರುವನಂತಪುರಂನಲ್ಲಿರುವ ಕೇರಳ ಆಡಳಿತ ನ್ಯಾಯಮಂಡಳಿ (ಕೆಎಟಿ) ಹೇಳಿದೆ.
ಸರ್ಕಾರಿ ಸಂಸ್ಥೆಗಳಲ್ಲಿ ಆಯಾಗಳು, ಶುಶ್ರೂಷಕರು ಕೆಲಸದ ಅವಧಿಯನ್ನು ದಿನಕ್ಕೆ ಎಂಟು ಗಂಟೆ ಮತ್ತು ವಾರಕ್ಕೆ ನಲವತ್ತೆಂಟು ಗಂಟೆಗಳಿಗೆ ಸೀಮಿತಗೊಳಿಸಬೇಕು. ನಾಲ್ಕು ತಿಂಗಳೊಳಗೆ ಪಾಳಿ ಆಧಾರಿತ ವ್ಯವಸ್ಥೆ ಜಾರಿಗೆ ತರಬೇಕು ಎಂದು ನ್ಯಾಯಮಂಡಳಿ ಆದೇಶಿಸಿದೆ.
ಈ ಸಂಸ್ಥೆಗಳ ಸಂಬಂಧಪಟ್ಟ ಅಧೀಕ್ಷಕರು ತಮ್ಮ ಸಂಸ್ಥೆಗಳ ನಿರ್ವಹಣಾ ಕೈಪಿಡಿಗೆ ಸೂಕ್ತವಾದ ಬದಲಾವಣೆ ಮಾಡಿ ಬದಲಿಸಲಾದ ಕೆಲಸದ ಸಮಯವನ್ನು ಜಾರಿಗೆ ತರುವಂತೆ ಸೂಚಿಸಿತು.
ರಾಜ್ಯದ ಸಾಮಾಜಿಕ ನ್ಯಾಯ ಇಲಾಖೆ ನಡೆಸುತ್ತಿರುವ ಹಿರಿಯ ನಾಗರಿಕರು ಮತ್ತು ಮಾನಸಿಕ ನ್ಯೂನತೆ ಹೊಂದಿರುವ ಮಕ್ಕಳ (ಪ್ರತೀಕ್ಷಾ ಭವನ ಮತ್ತು ಆಶಾ ಭವನ) ಕೇಂದ್ರಗಳಲ್ಲಿ ಕೆಲಸ ಮಾಡುವ ಐವರು ಆರೈಕೆದಾರರು ವಾರದಲ್ಲಿ ಆರು ದಿನ, ದಿನದ 24 ಗಂಟೆ ಕಾಲ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತದೆ ಎಂದು ದೂರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿ ತೀರ್ಪು ನೀಡಿದೆ.
ಮೇ 30ರಂದು ನೀಡಿರುವ ತೀರ್ಪಿನಲ್ಲಿ, ಶುಶ್ರೂಷಕರಿಗೆ ಪರಿಹಾರ ನೀಡಿದ ನ್ಯಾಯಮೂರ್ತಿ ಪಿ ವಿ ಆಶಾ ಮತ್ತು ಸದಸ್ಯ ಡಾ ಪ್ರದೀಪ್ ಕುಮಾರ್ ಅವರು ಸರ್ಕಾರ ಆರೈಕೆದಾರರ ನ್ಯಾಯಯುತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದರು.
“ಅರ್ಜಿದಾರರಂತಹ ಆರೈಕೆದಾರರನ್ನು ದಿನದ 24 ಗಂಟೆ ಕಾಲ ನಿರಂತರವಾಗಿ ಮತ್ತು ವಾರದಲ್ಲಿ 6 ದಿನಗಳು ವಿರಾಮವಿಲ್ಲದೆ ಕರ್ತವ್ಯ ನಿರ್ವಹಿಸುವಂತೆ ಒತ್ತಾಯಿಸುವುದು ನಿರಂಕುಶ ಮತ್ತು ಅಸಾಂವಿಧಾನಿಕ” ಎಂದು ಆದೇಶದಲ್ಲಿ ತಿಳಿಸಲಾಗಿದೆ.