ಮನೆ ರಾಜ್ಯ ಸಿದ್ದರಾಮಯ್ಯ ಶಾಂತ ರೀತಿಯಿಂದ ವರ್ತಿಸಲಿ: ಬಿಎಸ್’ವೈ

ಸಿದ್ದರಾಮಯ್ಯ ಶಾಂತ ರೀತಿಯಿಂದ ವರ್ತಿಸಲಿ: ಬಿಎಸ್’ವೈ

0

ಮೈಸೂರು(Mysuru): ಮೊಟ್ಟೆ ಎಸೆದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ವತಃ ಮುಖ್ಯಮಂತ್ರಿ ಹೇಳಿದ ಮೇಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಠಕ್ಕೆ ಬಿದ್ದಿರುವುದು ಸರಿಯಲ್ಲ. ಇನ್ನು ಮುಂದಾದರೂ ಶಾಂತ ರೀತಿಯಿಂದ ವರ್ತಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮೊಟ್ಟೆ ಎಸೆತ ಪ್ರಕರಣವನ್ನು ನೆಪ ಮಾಡಿಕೊಂಡು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಮೊಟ್ಟೆಯನ್ನು ಯಾರೇ ಎಸೆದಿದ್ದರೂ ಅದು ತಪ್ಪೇ. ಆದರೆ ಅದನ್ನೇ ನೆಪ ಮಾಡಿಕೊಂಡು ಪಾದಯಾತ್ರೆ ಹಮ್ಮಿಕೊಂಡಿರೋದು ಕೂಡ ತಪ್ಪು. ಇದನ್ನು ಮೀರಿಯೂ ಪಾದಯಾತ್ರೆ ನಡೆಸಿದರೆ ಕೊಡಗಿನಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಏನಾದರೂ ಅನಾಹುತವಾದರೆ ಅದಕ್ಕೆ ಸಿದ್ದರಾಮಯ್ಯರೇ ಜವಾಬ್ದಾರರಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಸಿದ್ದರಾಮಯ್ಯ ಟೀಕಿಸುತ್ತಿರುವುದು ಸರಿಯಲ್ಲ. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಸಿದ್ಧರಾಮಯ್ಯ ಇದೇ ರೀತಿ ಮುಂದುವರಿದರೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಆ ಕಾಲ ಬಹಳ ದೂರವಿಲ್ಲ ಎಂದರು.

ಸಾವರ್ಕರ್ ಅವರ ದೇಶಭಕ್ತಿಯನ್ನು ಜನರಿಗೆ ಸಾರುವ ಸಲುವಾಗಿ ರಥಯಾತ್ರೆ ನಡೆಸುತ್ತಿದ್ದೇವೆ.

ಹೆಚ್ಚಿನ ಜನರನ್ನು ಸೇರಿಸದೇ, ಶಾಂತಿಯುತವಾಗಿ ರಥಯಾತ್ರೆ ನಡೆಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅರಮನೆ ಆವರಣದಲ್ಲಿರುವ ದಸರಾ ಆನೆಗಳನ್ನು ವೀಕ್ಷಿಸಿದ ಬಿ.ಎಸ್.ಯಡಿಯೂರಪ್ಪ ಅವರು ಕಬ್ಬು, ಬೆಲ್ಲ ತಿನ್ನಿಸಿದರು. ಮಾವುತರು, ಕಾವಾಡಿಗರ ಯೋಗಕ್ಷೇಮ ವಿಚಾರಿಸಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್,ಸಂಸದ ಪ್ರತಾಪ್ ಸಿಂಹ ಮತ್ತಿತರರು ಜೊತೆಗಿದ್ದರು.