ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ 75 ವರ್ಷ ಆಗಿದೆ, ನಿವೃತ್ತಿ ಪಡೆದು ಬೇರೆಯವರಿಗೆ ಅವಕಾಶ ಮಾಡಿಕೊಡಲಿ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು.
ವಿಕಾಸ ಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಅಶ್ವಥ್ ನಾರಾಯಣ್, ಬಂಡತನ, ಜಿಹಾದೀಕರಣ ಮತಬ್ಯಾಂಕ್ ರಾಜಕಾರಣ ಅಂದ್ರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ನವರಿಗೆ ಮತ ಬ್ಯಾಂಕ್ ರಾಜಕಾರಣ ಮಾಡೋದು ಬಿಟ್ರೆ ಬೇರೆ ಏನು ಗೊತ್ತಿಲ್ಲ ಎಂದು ತೀವ್ರ ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್’ಗೆ ನಾಯಕತ್ವವೇ ಇಲ್ಲ, ಭವಿಷ್ಯ ಇಲ್ಲ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕೂಡ ವಯಸ್ಸಾಗಿದೆ. 75 ವರ್ಷ ಆದವರು ರಾಜಕೀಯದಿಂದ ನಿವೃತ್ತಿ ಆಗಲಿ. ಅವರ ರಾಷ್ಟ್ರೀಯ ಅಧ್ಯಕ್ಷರು ಕೂಡ 75 ವರ್ಷ ಆದವರು ಎಲ್ಲರೂ ರಾಜಕೀಯ ನಿವೃತ್ತಿ ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ರೌಡಿಗಳ ಸೇರ್ಪಡೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ ನಾರಾಯಣ, ಸೈಲೆಂಟ್ ಸುನೀಲ್ ಕಾರ್ಯಕ್ರಮಕ್ಕೂ ಪಾರ್ಟಿಗೂ ಸಂಬಂಧ ಇಲ್ಲ .ಸುನೀಲ್ ರಕ್ತದಾನ ಶಿಬಿರ ಮಾಡಿದ್ರು ಇಬ್ಬರು ಪ್ರತಿನಿಧಿಗಳು ಹೋಗಿದ್ರು, ನಾವು ಕಾನೂನಿಗೆ ಬೆಲೆ ಕೊಡ್ತೇವೆ. ಪಕ್ಷದ ಅಧ್ಯಕ್ಷರು ಕೂಡ ಇಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಪೊಲೀಸರ ಬಳಿ ಕೇಳಿ. ಕಾನೂನು ಚೌಕಟ್ಟನ್ನು ನಾವು ಪರಿಪಾಲನೆ ಮಾಡ್ತೇವೆ ಎಂದರು.