ಬೆಂಗಳೂರು: 2023-24ನೇ ಸಾಲಿನ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರವು ಘೋಷಿಸಿರುವಂತೆ ಬರ ಸಂಭವನೀಯ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300/- ಕೋಟಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಇಂದಿಲ್ಲಿ ಒತ್ತಾಯಿಸಿದರು.
ಕೇಂದ್ರ ಸರ್ಕಾರವು ದಿನಾಂಕ: 20.03.2023 ರಂದು ರಾಜ್ಯಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 2167ಕ್ಕೆ ಉತ್ತರ ನೀಡಿ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಹಂತದ ಮಂಜೂರಾತಿಗಳು ದೊರೆತಿದ್ದು, ಇದು ರಾಷ್ಟ್ರೀಯ ಯೋಜನೆಗಾಗಿ ಘೋಷಣೆ ಮಾಡಲು ಎಲ್ಲಾ ಅರ್ಹತೆ ಪಡೆದಿದೆ ಎಂದು ತಿಳಿಸಿರುತ್ತಾರೆ ಎಂದು ವಿವರಿಸಿದರು.
ದಿನಾಂಕ: 01.02.2023 ರಂದು ಕೇಂದ್ರ ಸರ್ಕಾರದ 2023-24ನೇ ಮುಂಗಡ ಪತ್ರದ ಭಾಷಣದಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಬಜೆಟ್ ಭಾಷಣದ ಪುಟ ಸಂಖ್ಯೆ (10) ಪ್ಯಾರಾ (39) ರಲ್ಲಿ ಈ ಕೆಳಕಂಡಂತೆ ಘೋಷಿಸಿರುತ್ತಾರೆ.
Water for Drought Prone Region : “ In the drought prone central region of Karnataka, central assistance of Rs. 5,300 crore will be given to upper Bhadra Project to provide sustainable micro irrigation and filling up of surface tanks for drinking water”.
ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಯೋಜನೆ ಘೋಷಣೆಗೆ ಎಲ್ಲಾ ಅರ್ಹತೆಗಳನ್ನು ಪಡೆದ ಮತ್ತು ಎಲ್ಲಾ ಷರತ್ತುಗಳನ್ನು ಪೂರೈಸಿ, ಅನುಮೋದನೆಗೊಂಡಿರುವ ರಾಷ್ಟ್ರೀಯ ಯೋಜನೆಗೆ ರಾಜಕೀಯ ಉದ್ದೇಶದಿಂದ ೨೦೨೩ರ ಸಾರ್ವತ್ರಿಕ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಮುಂಗಡ ಪತ್ರದ ಭಾಷಣದಲ್ಲಿ ತಾನೇ ಘೋಷಿಸಿದ ಘೋಷಣೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹಿಂದೆಟು ಹಾಕುತ್ತಿದೆ. ಈ ಕುರಿತು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ದಿನಾಂಕ: 03.08.2024 ರಂದು ಮತ್ತು ದಿನಾಂಕ: 19.06.2024 ರಂದು ಹಾಗೂ ದಿನಾಂಕ: 16.08.2023 ರಂದು ಬರೆದ ಪತ್ರಕ್ಕೆ ಉತ್ತರ ಬರೆದ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ ಇಲಾಖೆಯ ಕಾರ್ಯದರ್ಶಿ ದೇಬಶ್ರೀ ಮುಖರ್ಜಿಯವರು ಈ ಕೆಳಕಂಡಂತೆ ತಿಳಿಸಿರುತ್ತಾರೆ ಎಂದು ಸಚಿವರು ಹೇಳಿದರು. However, approval for inclusion of a project for partial financial assistance under the ongoing schemes of this Ministry requires compilation of updated financial details for the project, including the expenditure made, balance cost and the updated eligible central assistance based on the balance cost. Further, decision regarding inclusion of the project depends on the available funds, geographic distribution under the scheme, priority under the scheme, etc.
ಕೇಂದ್ರ ಸರ್ಕಾರದ ನಿಯಮಗಳು ಮತ್ತು ಷರತ್ತುಗಳಂತೆ ಎಲ್ಲಾ ಹಂತಗಳಲ್ಲೂ ಅನುಮೋದನೆಗೊಂಡು ಮುಂಗಡ ಪತ್ರದಲ್ಲಿ ಘೋಷಣೆಯಾಗಿರುವ ಯೋಜನೆಗೆ ಈಗ ನಿರಾಕರಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ಉನ್ನತ ಸಂಪ್ರದಾಯಗಳಿಗೆ ಮತ್ತು ನಿಯಮಗಳಿಗೆ ತದ್ವಿರುದ್ಧವಾಗಿದೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾವ ಪಕ್ಷದ್ದೇ ಆಗಿರಲಿ ಪಕ್ಷಪಾತ ರಹಿತವಾಗಿ ಜನಹಿತ ಕಾಪಾಡುವ ಮೌಲ್ಯಗಳಿಗೆ ಕೇಂದ್ರದ ಬಿ.ಜೆ.ಪಿ ಸರ್ಕಾರ ತಿಲಾಂಜಲಿ ಇಡುತ್ತಿದೆ. ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗೆ ರೂ. 5,300/- ಕೋಟಿಗಳನ್ನು ಬಿಡುಗಡೆ ಮಾಡಲು ಒತ್ತಾಯಿಸಿದರು. ಘೋಷಿತ ಅನುದಾನ ಬಿಡುಗಡೆ ಮಾಡದಿದ್ದರೆ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಹಾಗೂ ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯ ಗಮನಕ್ಕೆ ತಂದು ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.
ಮಹಾದಾಯಿ ಯೋಜನೆ ಕುರಿತು ಮಾಜಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಯವರ ಹೇಳಕೆಗೆ ಪ್ರತಿಕ್ರಿಯಿಸಿದ ಸಚಿವರು, “ಬಿಜೆಪಿ ಅವಧಿಯಲ್ಲಿಯೇ ಮಹಾದಾಯಿ ಜಲ ವಿವಾದ ಕುರಿತು ಟ್ರಿಬ್ಯೂನಲ್ ರಚಿಸಲು ಕೋರಿಕೆ ಸಲ್ಲಿಸಲಾಗಿತ್ತು. ಆದರೆ ಟ್ರಿಬ್ಯೂನಲ್ ಅವಶ್ಕತೆ ಇಲ್ಲದಿದ್ದರೂ ಕಾಂಗ್ರೆಸ್‌ನವರು ಟ್ರಿಬ್ಯೂನಲ್ ರಚಿಸಿದರು ಎಂದು ಟೀಕಿಸಿರುವುದು ಅವರ ನಿರ್ಲಕ್ಷವನ್ನು ತೋರುತ್ತದೆ. ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿ ರಾಜ್ಯದ ಪ್ರತಿಷ್ಠಿತ ಈ ಮಹತ್ವದ ಯೋಜನೆಗೆ ಅಡ್ಡಗಾಲು ಹಾಕುವುದನ್ನು ಬಿಟ್ಟು ಮಂಜೂರಾತಿ ನೀಡಬೇಕೆಂದು ಒತ್ತಾಯಿಸಿದರು.