ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ತೋರುತ್ತಿರುವ ಧೋರಣೆಯನ್ನು ಖಂಡಿಸಿ ಫೆಬ್ರವರಿ 7ರಂದು ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ವಿರುದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಿಎಂ ಮತ್ತು ಡಿಸಿಎಂ ಕರ್ನಾಟಕದ ಮಾನವನ್ನ ಹರಾಜು ಹಾಕುತ್ತಿದ್ದಾರೆ. ಯಾರಾದ್ರೂ ಸಿಎಂ, ಡಿಸಿಎಂ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಾರೆಯೇ. ಕಳೆದ ಯುಪಿಎ ಸರ್ಕಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಎಷ್ಟು ಅನುದಾನ ಬಂದಿತ್ತು, ಈಗ ನರೇಂದ್ರ ಮೋದಿ ನೇತೃತ್ವದಲ್ಲಿರುವ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದರು.
ರಾಜ್ಯಕ್ಕೆ ಏನು ಬಂದಿದೆ ಎಂದು ಪ್ರತಿಭಟನೆ ಮಾಡುವುದಕ್ಕೂ ಮುನ್ನ ಶ್ವೇತಪತ್ರ ಹೊರಡಿಸಲಿ. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಶ್ವೇತಪತ್ರ ಹೊರಡಿಸುವುದಿಲ್ಲ. ಒಂದು ವೇಳೆ ಶ್ವೇತ ಪತ್ರ ಹೊರಡಿಸಿದರೆ ಕೇಂದ್ರದ ವಿತ್ತ ಸಚಿವೆ ಆಗಿರುವಂತಹ ನಿರ್ಮಲ ಸೀತಾರಾಮನ್ ಅವರು ಈ ಒಂದು ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದೇವೆ ಎಂಬುದರ ಕುರಿತು ವಿವರ ನೀಡುತ್ತಾರೆ ಎಂದರು.