ನಂಜನಗೂಡು: ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರ ತಾಲೂಕಿನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಆರಂಭವಾಗಿದ್ದು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅರಿವು ಮೂಡಿಸುವ ಕೆಲಸ ಪರಿಣಾಮಕಾರಿ ಮೂಡಿಬರಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಎಂ.ಗಾಯಿತ್ರಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಂವಿಧಾನ ಜಾಗೃತಿ ಜಾಥಾ ಆಚರಣೆ ಸಂಬಂಧ ಜೂಮ್ ಮೂಲಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂವಿಧಾನ ಜಾಥಾ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬರಲು ಹಾಗೂ ಕಾರ್ಯಕ್ರಮದ ವೆಚ್ಚವನ್ನು ಭರಿಸಲು ಸರ್ಕಾರವು ಪ್ರತೀ ಪಂಚಾಯಿತಿಗೆ 10 ಸಾವಿರ ಅನುದಾನವನ್ನು ನೀಡುತ್ತಿ ಯದ್ದು ಕಾರ್ಯಕ್ರಮ ಪರಿಣಾಮಕಾರಿಯಾಗಿ ಮೂಡಿಬರಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನ ಸೇರುವ ಸ್ಥಳಗಳಲ್ಲಿ ಅರಿವು
ಹೆಚ್ಚು ಜನ ಸೇರುವ ಸ್ಥಳ ಗಳಾದ ಕೈಗಾರಿಕಾ ಪ್ರದೇಶಗಳಲ್ಲಿ ಮಹಿಳೆಯರನ್ನೊಳಗೊಂಡಂತೆ ಸಂವಿಧಾನ ಪೀಠಿಕೆಯನ್ನು ಓದಿಸುವ ಹಾಗೂ ಸಂವಿಧಾನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ, ಚಾಮುಂಡಿಬೆಟ್ಟದಲ್ಲಿ ಭಕ್ತಾಧಿಗಳೊಂದಿಗೆ ಸಂವಿಧಾನದ ಪೀಠಿಕೆಯನ್ನು ಓದಿಸಿ ಅವರಲ್ಲಿ ಅರಿವು ಮೂಡಿಸಲು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಸಂವಿಧಾನ ಪೀಠಿಕೆ ಹಾಗೂ ನಿರ್ದೇಶಕ ತತ್ವಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ತೃತೀಯ ಲಿಂಗಿಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಜಾಥಾವನ್ನು ಕೈಗೊಳ್ಳುವುದು. ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಸೇರುವ ಸಾರ್ವಜನಿಕರಿಗೆ ಸಂವಿಧಾನದ ಕುರಿತಾಗಿ ಒಂದು ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುವುದು. ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಅಲ್ಲಿ ಬರುವ ರೈತರಿಗೆ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ನರೇಗಾ ಸ್ಥಳದಲ್ಲಿ ರೈತರಿಗೆ ಜಾಗೃತಿ ಮೂಡಿಸುವ ಹಾಗೂ ಸಂಘ ಸಂಸ್ಥೆಗಳು ಒಗ್ಗೂಡಿಸಿಕೊಂಡು ಇಂಡಸ್ಟ್ರೀಸ್ ವರ್ಕರ್ಸ್ ಗೆ ಅರಿವು ಮೂಡಿಸುವುದು ಮುಂತಾದ ಕಾರ್ಯಕ್ರಮವನ್ನು ಕೈಗೊಂಡು ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಸೈಕಲ್ ಜಾಥಾ, ಬೈಕ್ ಜಾಥಾ, ಎತ್ತಿನಗಾಡಿ ಮೆರವಣಿಗೆ , ಟ್ರ್ಯಾಕ್ಟರ್ ಜಾಥಾ, ಮುಂತಾದವುಗಳ ಮೂಲಕ ಸಂವಿಧಾನದ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುವುದು ಹಾಗೂ ಜನರು ಅತೀ ಹೆಚ್ಚಾಗಿ ಸೇರುವ ಕಡೆ ಅರಿವು ಮೂಡಿಸುವ ಕಾರ್ಯವನ್ನು ನಡೆಸುವುದರಿಂದ ಕಾರ್ಯಕ್ರಮವು ಯಶಸ್ವಿ ಗೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಈ ಕಾರ್ಯಕ್ರಮ ಆಚರಣೆ ಮಾಡುವಾಗ ಯಾವುದೇ ಕಾರಣಕ್ಕೂ ಯಾವ ವಿಷಯದಲ್ಲೂ ಗೊಂದಲಗಳು ಉಂಟಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತೆಯಿಂದ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ನಂತರ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕರಾದ ಚಂದ್ರ ಶೇಖರ್ ಅವರು ಮಾತನಾಡಿ ವಿಶ್ವವಿದ್ಯಾಲಯ ಹಾಗೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅರಿವು ಮೂಡಿಸುವ ವಿಚಾರ
ಸಂಕಿರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಗಬೇಕು . ಕಾಲೇಜು ಮತ್ತು ಶಾಲಾ ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ ಹಾಗೂ ನಿರ್ದೇಶಕ ತತ್ವಗಳ ಅರಿವು, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿನ ಗ್ರಂಥಾಲಯಗಳಲ್ಲಿ ಸಂವಿಧಾನ ಕುರಿತ ಪುಸ್ತಕಗಳನ್ನು ಪ್ರದರ್ಶನ ಕೈಗೊಂಡು ಉತ್ತಮವಾಗಿ ಮೂಡಿಬರುವಂತೆ ಎಲ್ಲಾ ಅಧಿಕಾರಿಗಳು ಮುಂದಾಗಬೇಕು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಅಭಿವೃದ್ಧಿ ) ಡಾ.ಎಂ. ಕೃಷ್ಣರಾಜು, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ (ಆಡಳಿತ) ಸವಿತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.