ಮನೆ ರಾಜ್ಯ ಆಡಳಿತಾರೂಢ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಿ ನಮ್ಮನ್ನು ಸೋಲಿಸಲಿ: ಅಖಿಲ ಭಾರತ ಹಿಂದೂ ಮಹಾ ಸಭಾ

ಆಡಳಿತಾರೂಢ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಿ ನಮ್ಮನ್ನು ಸೋಲಿಸಲಿ: ಅಖಿಲ ಭಾರತ ಹಿಂದೂ ಮಹಾ ಸಭಾ

0

ಮಂಗಳೂರು(Mangalore): ಆಡಳಿತಾರೂಢ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಿ ನಮ್ಮನ್ನು ಸೋಲಿಸಲಿ. ಅದನ್ನು ಹೊರತಾಗಿ ಸಂಘಟನೆಯ ಮುಖಂಡರನ್ನು ವಿನಾಕಾರಣ ಜೈಲಿಗೆ ಕಳಿಸುವ ಕೆಲಸ ಬೇಡ. ಅವರಿಗೆ ನಾವು ಚುನಾವಣೆಯಲ್ಲೇ ಉತ್ತರ ಕೊಡುತ್ತೇವೆ ಎಂದು ಅಖಿಲ ಭಾರತ ಹಿಂದೂ ಮಹಾ ಸಭಾದ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್‌ ಪವಿತ್ರನ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಹಿಂದೂ ಮಹಾಸಭಾದ ಕಾರ್ಯಕರ್ತರನ್ನು ಹಾಗೂ ನಾಯಕರನ್ನು ಜೈಲಿಗೆ ಕಳಿಹಿಸುವುದನ್ನು ಈಗಿನ ಸರ್ಕಾರ ಇತ್ತೀಚಿನ ದಿನಗಳಲ್ಲಿ ವಾಡಿಕೆ ಮಾಡಿಕೊಂಡಿದೆ. ಸಾಕ್ಷ್ಯಾಧಾರ ಇಲ್ಲದೆಯೇ ಅವರ ಮೇಲೆ ಆರೋಪ ಹೊರಿಸಿ, ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಮೂಲಕ ಅವರ ಮನೋಬಲ ಕುಗ್ಗಿಸುವ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.

ದೇವಸ್ಥಾನಗಳ ಧ್ವಂಸ ಪ್ರಕರಣವನ್ನು ಖಂಡಿಸಿದ್ದ ನಮ್ಮ ಸಂಘಟನೆಯ ಮುಖಂಡರ ಮೇಲೆ ಕೃತ್ಯಕ್ಕೆ ಸಂಬಂಧವೇ ಇಲ್ಲದ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಹನಿಟ್ರ್ಯಾಪ್‌ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಯತ್ನಿಸಿದ್ದಾರೆ. ಸಾಕ್ಷ್ಯಾಧಾರಗಳಿಲ್ಲದೇ ಇದ್ದರೂ ಸುರತ್ಕಲ್ ಠಾಣೆಯಲ್ಲಿ ಸುಲಿಗೆ ಹಾಗೂ ಬೆದರಿಕೆ ಪ್ರಕರಣ ದಾಖಲಿಸಿ ನನ್ನನ್ನು ಜೈಲಿಗೆ ಹಾಕಿದರು. ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿ ನನಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ ಎಂದು ತಿಳಿಸಿದರು.

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಹಿಂದೂ ಸಮುದಾಯ ಚಿಂತಿಸುತ್ತಿದೆ. ಹಿಂದೂ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಈ ಬಾರಿ ನಾವು 224 ಕ್ಷೇತ್ರಗಳಲ್ಲೂ ಸ್ಪರ್ಧಿಸುವ ಬಗ್ಗೆ ಗಮನ ಹರಿಸಿದ್ದೇವೆ. 2023ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಹಿಂದೂ ಮಹಾಸಭಾದ ಪುನಃಶ್ಚೇತನ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯಸ್ವಾಮಿ ಭಾಗವಹಿಸಲಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಸಂಘಟನೆಯ ಮನೋಬಲ ಕುಗ್ಗಿಸುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದರು.

ಹಿಂದೂ ನಾಯಕರು ಅಧಿಕಾರಕ್ಕೆ ಬರಬೇಕೆಂಬ ಕಾರಣಕ್ಕೆ ರೂಪುಗೊಂಡ ವೇದಿಕೆ ಹಿಂದೂ ಮಹಾಸಭಾ. ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಬಳಿಕ ಬೇಸತ್ತ ಬಿಜೆಪಿಯ ಹಾಗೂ ಸಂಘ ಪರಿವಾರದ ನಾಯಕರು ನಮ್ಮ ಸಂಘನೆಗೆ ಸೇರುತ್ತಿದ್ದಾರೆ. ಹಿಂದೂಗಳಿಗೆ ರಕ್ಷಣೆ ಸಿಗಬೇಕಾದರೆ ನಾವು ಗೆಲ್ಲಬೇಕು ಎಂದರು.

ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದೂ ಮಹಾಸಭಾದಿಂದ ಚುನಾವಣೆಗೆ ಸ್ಪರ್ಧಿಸಲು ಅನೇಕರು ಅರ್ಜಿ ಸಲ್ಲಿಸಿದ್ದಾರೆ. 83 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜನವರಿಯಲ್ಲಿ ಬಿಡುಗಡೆ ಮಾಡಲಿದ್ದೇವೆ. ಕೆಲವು ರೈತ ಸಂಘಗಳು ನಮ್ಮೊಂದಿಗೆ ಸೇರುತ್ತಿದ್ದಾರೆ. ಸಮಾನ ಮನಸ್ಕ ಸಂಘಟನೆಗಳು ಸೇರಿ ಕೇಸರಿ ಒಕ್ಕೂಟ ರಚಿಸಿಕೊಳ್ಳಲಿದ್ದೇವೆ ಎಂದರು.