ಮನೆ ರಾಜ್ಯ ಅವರಿಬ್ಬರೇ ರಾಜಕಾರಣ ಮಾಡಿ, ಅವರಿಬ್ಬರೇ ನಡೆಸಲಿ: ಡಿಕೆಶಿ ಒಪ್ಪಂದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಪರಮೇಶ್ವರ್

ಅವರಿಬ್ಬರೇ ರಾಜಕಾರಣ ಮಾಡಿ, ಅವರಿಬ್ಬರೇ ನಡೆಸಲಿ: ಡಿಕೆಶಿ ಒಪ್ಪಂದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಪರಮೇಶ್ವರ್

0

ಬೆಂಗಳೂರು, ಡಿಸೆಂಬರ್ 5: ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದವಾಗಿದೆ ಎಂಬ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆ ಇದೀಗ ಕರ್ನಾಟಕ ಕಾಂಗ್ರೆಸ್​ನಲ್ಲಿ ಮತ್ತೆ ಚರ್ಚೆ ಹುಟ್ಟು ಹಾಕಿದೆ.

Join Our Whatsapp Group

ಡಿಕೆಶಿ ಹೇಳಿಕೆಗೆ ಬುಧವಾರ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಮ್ಮ ನಡುವೆ ಯಾವ ಒಪ್ಪಂದವೂ ಆಗಿಲ್ಲ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಇದೀಗ ಅಧಿಕಾರ ಹಂಚಿಕೆ ಒಪ್ಪಂದ ಹೇಳಿಕೆ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಒಪ್ಪಂದ ಆಗಿದೆ ಎಂದಾದರೆ ನಾವೆಲ್ಲರೂ ಯಾಕೆ ಇರಬೇಕು? ಅವರಿಬ್ಬರೇ ರಾಜಕಾರಣ ಮಾಡಿ, ಅವರಿಬ್ಬರೇ ನಡೆಸಿ ಬಿಡಲಿ. ಬೇರೆಯವರು ಇರುವುದೇ ಬೇಡವಾ ಎಂದು ಪ್ರಶ್ನಿಸಿದ್ದಾರೆ.

ಯಾವ ಒಪ್ಪಂದ ಆಗಿದೆಯೋ ನಮಗೆ ಗೊತ್ತಿಲ್ಲ. ​ನಾನು 2-3 ಜನರನ್ನು ದೆಹಲಿಯಲ್ಲಿ ಕೇಳಿದೆ, ಇಲ್ಲೂ ಕೇಳಿದೆ. ಒಪ್ಪಂದ ಆಗಿದೆ ಎಂದು ಯಾರೂ ಹೇಳಿಲ್ಲ. ಡಿಕೆ ಶಿವಕುಮಾರ್ ಯಾವ ಅರ್ಥದಲ್ಲಿ ‌ಹೇಳಿದರೋ ಗೊತ್ತಿಲ್ಲ. ಯಾವುದೇ ಒಪ್ಪಂದ ಆಗಿಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಆ ರೀತಿ ಆಗಲು ಸಾಧ್ಯವಿಲ್ಲ, ಹೈಕಮಾಂಡ್ ಬಿಟ್ಟು ಹೋಗಲ್ಲ. ಹೈಕಮಾಂಡ್ ತೀರ್ಮಾನ ಒಪ್ಪಿಕೊಳ್ಳುತ್ತೇವೆ ಎಂದು ಪರಮೇಶ್ವರ್ ಹೇಳಿದರು.

ಹಾಸನದಲ್ಲಿ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ಜನ ಸ್ವಾಭಿಮಾನಿ ಒಕ್ಕೂಟಗಳನ್ನು ಮಾಡಿಕೊಂಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ, ಸರ್ಕಾರಕ್ಕೆ ಸಿಂಪಥೈಸರ್ಸ್. ಅವರೊಂದಿಗೆ ಪಕ್ಷವೂ ಸೇರಿದೆ. ಎಲ್ಲ ಒಟ್ಟಿಗೆ ಸೇರಿ ಸಮಾವೇಶ ಮಾಡುತ್ತಿದ್ದೇವೆ. ಚುನಾವಣೆ ಸಂಧರ್ಭದಲ್ಲಿ ರಾಜಕೀಯವಾಗಿ ಮಾತಾಡಿದ್ದೆವು, ಅದನ್ನು ಜನರಿಗೆ ಹೇಳಬೇಕು. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ವಿಚಾರ ಪ್ರಸ್ತಾಪ ಮಾಡಲು ಆಗಲ್ಲ. ಜನರಿಗೆ ಸತ್ಯಾಂಶವನ್ನು ತಿಳಿಸಬೇಕು. ವಿಪಕ್ಷಕ್ಕೆ ರಾಜಕೀಯವಾಗಿ ಉತ್ತರ ಕೊಡಬೇಕು. ರಾಜಕೀಯವಾಗಿ ಉತ್ತರ ಕೊಡಲು ಸಮಾವೇಶ ಮಾಡುತ್ತಿದ್ದೇವೆ ಎಂದರು.

ಇದು ಪಕ್ಷದ ಕಾರ್ಯಕ್ರಮ, ನಮ್ಮಲ್ಲಿ ಯಾವುದೇ ಬಣವಿಲ್ಲ. ಬಿಜೆಪಿಯಲ್ಲಿ ಮೂರು ಬಣವಿದೆ. ನಮ್ಮಲ್ಲಿ ಬಣವನ್ನು ಸೃಷ್ಟಿಸಲು ಬಿಜೆಪಿ ಯತ್ನಿಸಬಹುದು ಅಷ್ಟೇ ಎಂದರು.

ಮುಡಾ ವಿಚಾರವಾಗಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಅಲಿಬಾಬ ಮತ್ತು 40 ಕಳ್ಳರ ಸರ್ಕಾರ ಎಂದು ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾರೆ. ಅದಕ್ಕೆಲ್ಲ ನಾವೇನು ಉತ್ತರ ಕೊಡಬೇಕಾಗಿಲ್ಲ. ಅದು ಅವರ ವ್ಯಾಖ್ಯಾನ. ಸಂದರ್ಭ ಬಂದಾಗ ಉತ್ತರ ‌ಕೊಡುತ್ತೇವೆ ಎಂದರು.