ಮನೆ ರಾಜಕೀಯ ಮೀಸಲಾತಿ ಬಗ್ಗೆ ಮಾತನಾಡುವವರು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ: ಎಚ್.ಡಿ.ದೇವೇಗೌಡರಿಂದ ಪಂಥಾಹ್ವಾನ

ಮೀಸಲಾತಿ ಬಗ್ಗೆ ಮಾತನಾಡುವವರು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ: ಎಚ್.ಡಿ.ದೇವೇಗೌಡರಿಂದ ಪಂಥಾಹ್ವಾನ

0

ಮೈಸೂರು(Mysuru): ಮೀಸಲಾತಿ ಬಗ್ಗೆ ಮಾತನಾಡುವ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪಂಥಾಹ್ವಾನ ನೀಡಿದರು.

ಹೊರವಲಯದ ರೆಸಾರ್ಟ್‌ನಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಗುರುವಾರ ಆಯೋಜಿಸಿದ್ದ ಸಮಾಲೋಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಈ ರಾಜ್ಯದಲ್ಲಿ ಮೀಸಲಾತಿ ಬಗ್ಗೆ ಮಾತನಾಡುವ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ನನ್ನೊಂದಿಗೆ ಚರ್ಚೆಗೆ ಬರಲಿ. ಸಾರ್ವಜನಿಕವಾಗಿ ಚರ್ಚೆ ಮಾಡೋಣ. ಪ್ರತಿಯೊಂದು ವರ್ಗವನ್ನೂ ಗುರುತಿಸಿದ ವ್ಯಕ್ತಿ ಇದ್ದರೆ ಅದು ನಾನು. ಇದು ಅಹಂಕಾರ ಇಲ್ಲ. ಸತ್ಯ ಹೇಳಲು ಯಾರ ಮುಂದೆ ಬೇಕಾದರೂ ನಿಲ್ಲಬಲ್ಲೆ. ಯಾವ ಆತಂಕವೂ ನನಗಿಲ್ಲ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟವರು ಕಾಂಗ್ರೆಸ್‌ನವರೋ, ಬಿಜೆಪಿಯವರೋ? ಅಂಥವರು ಶಕ್ತಿ ಇದ್ದರೆ ನನ್ನ ಮುಂದೆ ಬಂದು ನಿಲ್ಲಲಿ. ಎಲ್ಲೇ ವೇದಿಕೆ ಮಾಡಿದರೂ ಅಲ್ಲಿಗೆ ಹೋಗಿ ಚರ್ಚಿಸಲು ಸಿದ್ಧವಿದ್ದೇನೆ. ರಾಜ್ಯದಲ್ಲಿ ಮೊದಲಿಗೆ ಮೀಸಲಾತಿ ವ್ಯವಸ್ಥೆ ಮಾಡಿದವರು ಯಾರು? ನನಗಿನ್ನೂ ಜ್ಞಾಪಕ ಶಕ್ತಿ ಇದೆ. ನಾವಿದ್ದೀವಿ; ನೀವು ಹೆದರಬೇಡಿ ಎಂದು‌ ಪಕ್ಷದ ಮುಖಂಡರಿಗೆ ಧೈರ್ಯ‌ ತುಂಬಿದರು.

ಕುಮಾರಸ್ವಾಮಿ ಮಾಡಿರುವ ಕೆಲಸದ ಬಗ್ಗೆ ಮಾತನಾಡಲು ಬಹಳ ಇದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಅತ್ಯಂತ ಅವಶ್ಯವಾಗಿದೆ. ಅವರಿಗೆ ಅನುಭವದ ಕೊರತೆ ಇಲ್ಲ. ಪ್ರತಿಯೊಬ್ಬರಲ್ಲೂ ಶಕ್ತಿ ಇದೆ. ಅದನ್ನು ಬಳಸಿಕೊಳ್ಳಬೇಕು ಎಂದರು.

ನನ್ನ ಹೋರಾಟ ನಿಲ್ಲಿಸುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಬೇಕು ಎಂಬುದಷ್ಟೇ ಉದ್ದೇಶವಲ್ಲ. ಎಲ್ಲ ಶಕ್ತಿಯನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿದರೆ ಅನುಕೂಲ ಆಗುತ್ತದೆ ಎಂದರು.

ಎಲ್ಲರೂ ಹೋರಾಟದ ಸಂಕಲ್ಪ ಮಾಡಬೇಕು. ಪಕ್ಷಕ್ಕೆ ಶಕ್ತಿ ಇಲ್ಲ‌ ಎಂಬ ಮನೋಭಾವ ಅನೇಕರ ಮನಸ್ಸಿನಲ್ಲಿದೆ. ಹಾಗೆಂದು ಭಾವಿಸಬೇಡಿ. ನಾನು ನಿಮ್ಮ ಜೊತೆಗಿದ್ದೇನೆ. ಜೆಡಿಎಸ್ ಮುಳುಗೇ‌‌ ಹೋಯಿತು ಎನ್ನುವವರಿದ್ದಾರೆ. ಅವರಿಗೆ ಹೇಗೆ ಉತ್ತರ ಕೊಡಬೇಕು ಎನ್ನುವುದು ‌ಗೊತ್ತಿದೆ ಎಂದು ಗುಡುಗಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಬೇಕು ಎನ್ನುವುದು ‌ಮುಖ್ಯವಲ್ಲ. ಈ ಪಕ್ಷ‌ ಉಳಿಯಬೇಕು ಎನ್ನುವುದು ನನ್ನ ಆಶಯ ಎಂದರು.

ದೇವೇಗೌಡರು ಮಾತನಾಡುವಾಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಭಾವುಕರಾದರು.