ಮನೆ ರಾಜ್ಯ ಸುಸ್ಥಿರ ಬದುಕು ಕಟ್ಟಲು ಯುವ ಸಮುದಾಯ ಯೋಚಿಸಲಿ: ಹರೀಶ್‌ ಹಂದೆ

ಸುಸ್ಥಿರ ಬದುಕು ಕಟ್ಟಲು ಯುವ ಸಮುದಾಯ ಯೋಚಿಸಲಿ: ಹರೀಶ್‌ ಹಂದೆ

0

ಮೈಸೂರು(Mysuru): 60 ಕೋಟಿ ಜನರ ದಿನದ ಗಳಿಕೆ 30 ಆಗಿರುವಾಗ ಬಡವರಿಗಾಗಿ, ಅವರಿಗೆ ಸುಸ್ಥಿರ ಬದುಕನ್ನು ಕಟ್ಟಿಕೊಡುವುದಕ್ಕಾಗಿ ಯುವ ಸಮುದಾಯವು ಹಂಬಲಿಸಬೇಕು’ ಎಂದು ಸೆಲ್ಕೋ ಇಂಡಿಯಾದ ಹರೀಶ್ ಹಂದೆ ಕರೆ ನೀಡಿದರು.

ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ‘ದಲ್ಲಿ ‘ಬಡತನ ಮತ್ತು ಸುಸ್ಥಿರತೆ’ ಕುರಿತು ವಿದ್ಯಾರ್ಥಿಗಳು– ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು, ‘ದೇಶವನ್ನು ಬಿಕ್ಕಟ್ಟುಗಳಿಂದ ಕಾಯ್ದವರು, ಮುನ್ನಡೆಸಿದವರು ಬಡವರೇ ಹೊರತು ಶ್ರೀಮಂತರಲ್ಲ ಎಂದರು.

ಸರ್ಕಾರದಿಂದ ಸಾಲಮನ್ನಾ ಸೇರಿದಂತೆ ಇತರ ಯೋಜನೆಗಳಡಿ ಬಡವರಿಗೆ ಶೇ 2 ಸಬ್ಸಿಡಿ ಸಿಕ್ಕರೆ, ಮಧ್ಯಮ ವರ್ಗದವರಿಗೆ ಅಗ್ಗದ ವಿಮಾನಯಾನ, ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯ ಸೇವೆಗಳಡಿ ಶೇ 6 ಸಬ್ಸಿಡಿ ಸಿಗುತ್ತದೆ. ಆದರೆ, ಮಧ್ಯಮವರ್ಗವು ಬಡವರನ್ನೇ ದೂರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಧ್ಯಮ ವರ್ಗದ ಮಕ್ಕಳು ಐಐಟಿ, ಐಐಎಂ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವುದು ಬಡವರ ಬೆವರಿನ ತೆರಿಗೆಯಲ್ಲಿ ಎಂಬುದನ್ನು ನೆನಪಿಡಬೇಕು. ವಿಪರ್ಯಾಸವೆಂದರೆ ಅಲ್ಲಿ ಕಲಿತವರು ವಿದೇಶಗಳಿಗೆ ಹೋಗುತ್ತಾರೆ. ಇಲ್ಲಿ ಅವರಿಗಾಗಿ ದುಡಿದವರನ್ನು ಮರೆಯುತ್ತಾರೆ ಎಂದರು.

ಜಗತ್ತಿನ ಎಲ್ಲ ಸಮಸ್ಯೆಗಳು ನಮ್ಮಲ್ಲಿವೆಯೆಂದು ದೂರುವುದಕ್ಕಿಂತ ಪ್ರತಿ ಸಮಸ್ಯೆಗೂ ಐದು ಪರಿಹಾರೋಪಾಯ ನೀಡುವತ್ತ ಎಲ್ಲರೂ ಮುಂದಾದರೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಸೂಪರ್‌ ಪ‍ವರ್‌ ದೇಶ ಭಾರತವೇ ಆಗಲಿದೆ ಎಂದು ಹೇಳಿದರು.

ವಿಡಬ್ಲ್ಯೂಎಫ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಬಿ.ಆರ್. ಪೈ ಅವರು ಶ್ರೀಎಂ ಅವರ ‘ಸಾಧನಾ – ಪಾಥ್ ಆಫ್ ಲಿಬರೇಷನ್’ ಕೃತಿ ಬಿಡುಗಡೆ ಮಾಡಿದರು.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಇದ್ದರು.

ಹಿಂದಿನ ಲೇಖನಶ್ರೀನಗರದಲ್ಲಿ ಕಂದಕಕ್ಕೆ ಉರುಳಿದ ಬಸ್: 9 ಜನರ ಸಾವು
ಮುಂದಿನ ಲೇಖನಮೇ 28 ರಂದು ಬೃಹತ್‌ ಉದ್ಯೋಗ ಮೇಳ: ಮೂರು ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ