ಮನೆ ರಾಜಕೀಯ ಸ್ವಾವಲಂಬಿ ಭಾರತ ಕಟ್ಟೋಣ: ಬಿ.ವೈ.ವಿಜಯೇಂದ್ರ

ಸ್ವಾವಲಂಬಿ ಭಾರತ ಕಟ್ಟೋಣ: ಬಿ.ವೈ.ವಿಜಯೇಂದ್ರ

0

ಹುಣಸೂರು(Hunsur): ಎಲ್ಲರೂ ಬಸವತತ್ವ ಅನುಸರಿಸೋಣ, ಸ್ವಾವಲಂಬಿ ಭಾರತ ಕಟ್ಟೋಣ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಹುಣಸೂರಿನಲ್ಲಿ ಇಂದು ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಕಲ್ಯಾಣಕ್ಕಾಗಿ ದುಡಿಯೋಣ, ಸ್ವಾಭಿಮಾನಿಯಾಗಿ ನಮ್ಮ ಕಾಲಮೇಲೆ ನಾವು ನಿಲ್ಲೋಣ, ನೀವು ಪ್ರತಿಯೊಬ್ಬರೂ ಶ್ರಮ ಜೀವಿಯಾಗಿ ಈ ನಾಡು ಕಟ್ಟಿ ನಾನು ನಿಮ್ಮೊಂದಿಗಿರುವೆ ಎಂದು ಹೇಳಿದರು.

ಕರ್ನಾಟಕದಲ್ಲಿ ಅನುಭವ ಮಂಟಪದ ಕಲ್ಪನೆಯನ್ನು ಕಟ್ಟಿಕೊಡುವ ಸ್ಥಳ ಯಾವುದಾದರು ಇದ್ದರೆ ಅದು ದೇವರಾಜ ಅರಸರಿಗೆ ಜನ್ಮಕೊಟ್ಟ ಹುಣಸೂರು ತಾಲ್ಲೂಕು ಮಾತ್ರ ಎಂದು ಹೇಳಲು ಈ ಸಂದರ್ಭದಲ್ಲಿ ಹೆಮ್ಮೆ ಎನಿಸುತ್ತದೆ ಎಂದು ನುಡಿದರು.

ಅನುಭವ ಮಂಟಪದ ಕಲ್ಪನೆಯ ಎಲ್ಲಾ ಶರಣರ ಸಮುದಾಯಗಳೂ ಹುಣಸೂರಿನಲ್ಲಿವೆ. ಅದರಲ್ಲೂ ಕಾಯಕ ಸಮುದಾಯಗಳು, ಆದಿವಾಸಿ ಸಮುದಾಯ ಹಾಗೂ ಅಲೆಮಾರಿ ಸಮುದಾಯಗಳು ಈ ತಾಲ್ಲೂಕಿನಲ್ಲಿರುವುದರಿಂದ ಹುಣಸೂರು ಅಣ್ಣ ಬಸವಣ್ಣನವರ ಕಲ್ಪನೆಯ ಅನುಭವ ಮಂಟಪ ಎಂದು ನಾನು ಕರೆಯುತ್ತಿದ್ದೇನೆ. ಬಹುಶಃ ಇದರ ಪ್ರೇರಣೆಯೇ ದಿವಂಗತ ದೇವರಾಜ ಅರಸರಿಗೆ ದೊರೆತಿರಬೇಕೆಂಬುದು ನನ್ನ ಭಾವನೆ. ಆ ಕಾರಣಕ್ಕಾಗಿಯೇ ಬಸವಣ್ಣನವರ ಸಾಮಾಜಿಕ ಕ್ರಾಂತಿಯನ್ನು ಅರಸರು ಅವರ ಆಡಳಿತದಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ ಎಂದರು.

ಇಂದು ಅರಸರ ಚಿಂತನೆ ಹಾಗೂ ಬಸವಣ್ಣನವರ ತತ್ವದ ಅನುಸರಣೆ ಕಾಣುವುದು ಬಲು ಅಪರೂಪವಾಗಿದೆ. ಬಸವಣ್ಣನವರು ಅಂದಿಗೂ, ಇಂದಿಗೂ, ಎಂದೆಂದಿಗೂ ವಿಶ್ವಗುರುವಾಗಿ ಏಕೆ ನಿಲ್ಲುತ್ತಾರೆ ಎಂದರೆ ಅವರ ಕಾಯಕಕ್ರಾಂತಿ, ಅನುಸರಿಸಿದವರು ಸ್ವಾಭಿಮಾನಿಗಳಾಗಿ ಎದ್ದುನಿಲ್ಲುತ್ತಾರೆ. ಜನರ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ಇವತ್ತು ಯಡಿಯೂರಪ್ಪನವರಲ್ಲಿ ಜನಕಲ್ಯಾಣದ ಬದ್ಧತೆ ಬಂದಿದ್ದರೆ, ಸ್ವಾಭಿಮಾನದ ಕಿಚ್ಚು ಅವರ ರಕ್ತದ ಕಣ ಕಣದಲ್ಲಿ ತುಂಬಿಕೊಂಡಿದ್ದರೆ ಅದಕ್ಕೆ ಕಾರಣವೇ ಅವರು ಬಸವತತ್ವ ಅನುಸರಿಸಿದ್ದು ಎಂದು ನುಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಸಹ ಬಸವಣ್ಣನವರ ತತ್ವವನ್ನು ಅನುಸರಿಸಿ ಮುನ್ನಡೆಯುತ್ತಿದ್ದಾರೆ. ಅವರ ಆತ್ಮ ನಿರ್ಭರ ಭಾರತದ ಕಲ್ಪನೆಗೆ ಪ್ರೇರಣೆಯೇ ಬಸವಣ್ಣನವರು. ಬಸವಣ್ಣ ನಮ್ಮ ಕನ್ನಡ ನಾಡಿನ ಹೆಮ್ಮೆಯ ಸಂಕೇತ, ಬಸವಣ್ಣನವರ ಕಲ್ಪನೆಯ ಕಾಯಕ ಯೋಗಿಯಾಗಿ ಅವತಾರವೆತ್ತಿದವರು ಈ ನೆಲದ ನಡೆದಾಡುವ ದೇವರಾಗಿದ್ದ ಸಿದ್ದಗಂಗಾ ಶ್ರೀಗಳಾದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳನ್ನು ಈ ಸಂದರ್ಭದಲ್ಲಿ ಭಕ್ತಿಯಿಂದ ಸ್ಮರಿಸುತ್ತೇನೆ ಎಂದು ತಿಳಿಸಿದರು.